ಸಿಎಂ ವಾಹನಕ್ಕೆ ಘೆರಾವು ಯತ್ನ; ಬೆಲ್ಲದ, ಟೆಂಗಿನಕಾಯಿ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರ ಬಂಧನ.
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣವನ್ನು ವಜಾ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೆರಾವು ಹಾಕಲು ಯತ್ನಿಸಿದ್ದ. ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದರು. ಅವರು ಸಾಗುವ ಮಾರ್ಗಮಧ್ಯದ ಅಕ್ಷಯ ಪಾರ್ಕ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.
ನಡು ರಸ್ತೆಯಲ್ಲೇ ಮುಖ್ಯಮಂತ್ರಿಗಳ ವಾಹನ ತಡೆದು, ‘ಯಾವುದೇ ಕಾರಣಕ್ಕೂ ಹಳೇ ಹುಬ್ಬಳ್ಳಿಯ ಗಲಭೆಕೋರರ ಪ್ರಕರಣವನ್ನು ವಜಾ ಮಾಡದಂತೆ ಮತ್ತು ಅತ್ಯಾಚಾರದ ಆರೋಪ ಹೊತ್ತಿರುವ ಮಾಜಿ ಶಾಸಕ ವಿನಯ ಕುಲಕರ್ಣಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಮನವಿ ಸಲ್ಲಿಸಲು ತಯಾರಿ ನಡೆಸುಕೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನವೇ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದ ಪೊಲೀಸರು, ಅಕ್ಷಯ ಪಾರ್ಕ ಸಭಾಬವನಕ್ಕೆ ಕರೆದೊಯ್ದು, ಬಿಡುಗಡೆಗೊಳಿಸಿದರು.
ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ,ಅನೂಪ ಬಿಜವಾಡ ರಾಜು ಜರತಾರಘರ, ಪ್ರಕಾಶ.ಕ್ಯಾರಕಟ್ಟಿ ಅಶೋಕ ಕಾಟವೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.