ದೀಪಾವಳಿಗೆ ಸಿಹಿ ಕೊಡಲು ಬಂದ ಇನಸ್ಪೆಕ್ಟರಗೆ ಚಳಿ ಬಿಡಿಸಿದ ಕೇಂದ್ರ ಸಚಿವ ಜೋಶಿ.
ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರಿಗೆ ಅನವಶ್ಯಕ ತೊಂದರೆ ನೀಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೆವರಿಳಿಸಿದ್ದಾರೆ.
ಧಾರವಾಡದ ಗೊಲ್ಲರ ಓಣಿ ನಿವಾಸಿ ರವಿ ಗೊಲ್ಲರ ಎಂಬುವವರು ಕಟ್ಟಾ ಬಿಜೆಪಿ ಕಾರ್ಯಕರ್ತ. ಕಾಂಗ್ರೆಸ್ ಅಧಿಕಾರಕ್ಕೆ ಬಂತ ತಕ್ಷಣ ಅಲ್ಲಿನ ಕೆಲವರ ಮಾತು ಕೇಳಿಕೊಂಡು ರವಿ ಮೇಲೆ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ಕಾಡದೇವರಮಠ ಕೆಂಡ ಕಾರುತ್ತಿದ್ದಾರೆ. ಸುಖಾ ಸುಮ್ಮನೆ ಠಾಣೆಗೆ ಕರೆಸಿ, ಇಲ್ಲ ಸಲ್ಲದ ಆರೋಪ ಹೊರಿಸಿ ಮನಬಂದಂತೆ ಥಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜೋಶಿ ಅವರನ್ನು ಭೇಟಿಯಾದ ರವಿ ನೇತೃತ್ವದ ತಂಡ ವರದಿ ಒಪ್ಪಿಸಿದರು.
ಕೆಂಡಾಮಂಡಲವಾದ ಜೋಶಿ, ಕಾಡದೇವರಮಠ ಅವರನ್ನು ಕರೆಯಿಸಿ ಬೆವರಿಳಿಸಿದರು. ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು. ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಬಳಿ ಅಧಿಕಾರ ಇದ್ದಾಗ ಒಂದು ರೀತಿ ಇರ್ತಿರಿ. ಈಗ ಮತ್ತೊಂದು ರೀತಿ ಇರ್ತೀರಾ…ಪೊಲೀಸ್ ಠಾಣೆಯೊಳಗೆ ಹೊಡೆಯೋದಕ್ಕೆ ನಿಮಗೇನು ಹಕ್ಕಿದೆ ಎಂದು ಪೊಲೀಸ್ ಅಧಿಕಾರಿಯನ್ನು ಜೋಶಿ ತರಾಟೆಗೆ ತೆಗೆದುಕೊಂಡರು.
ತಪ್ಪು ಮಾಡಿದ್ದರೆ ಶಿಕ್ಷೆ ನೀಡಿ. ಅವಶ್ಯಕವಾಗಿ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಉದಯ ವಾರ್ತೆ ಹುಬ್ಬಳ್ಳಿ.