ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಮುನ್ಸೂಚನೆ; ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ*

Share to all

*ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಮುನ್ಸೂಚನೆ; ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ*

*ಧಾರವಾಡ (ಕರ್ನಾಟಕ ವಾರ್ತೆ)ಅಕ್ಟೋಬರ್ 10:* ಭಾರತೀಯ ಹವಾಮಾನ ಇಲಾಖೆ ವರದಿಯಂತೆ ವಾಯುಭಾರ ಕುಸಿತದಿಂದ ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಮುನ್ಸೂಚನೆ ಇದ್ದು, ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಆದೇಶಿಸಿದ್ದಾರೆ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯ ಎಲ್ಲ ತಾಲ್ಲೂಕಿನ ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿಗಳಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರು ತಿಳಿಸಿದ್ದಾರೆ.

ಈ ಕುರಿತು ಆದೇಶಿಸಿರುವ ಅವರು, ಜಿಲ್ಲೆಯಲ್ಲಿ ಇಂದಿನ (ಅ.10) ಬೆಳಿಗ್ಗೆ 8:30 ಗಂಟೆಗೆ ಒಳಗೊಂಡಂತೆ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸಾಮಾನ್ಯ ಮಳೆ 4.4 ಮೀ.ಮೀ. ಬದಲಾಗಿ 26.8 ಮೀ.ಮೀ ವಾಸ್ತವ ಮಳೆಯಾಗಿದೆ. ಅಣ್ಣಿಗೇರಿ ತಾಲ್ಲೂಕು ಹೊರತು ಪಡಿಸಿ ಉಳಿದ 7 ತಾಲ್ಲೂಕುಗಳಲ್ಲಿ ಸಾಮಾನ್ಯ ಮಳೆಗಿಂತ ವಾಸ್ತವಿಕವಾಗಿ ಮಳೆ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ 4 ದಿನ ಅತಿಯಾದ ಮಳೆಯಾಗುವ ಸಾಧ್ಯತೆ ಇದೆ. ಕಾರಣ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಅವರು ತಿಳಿಸಿದ್ದಾರೆ.

*ಅಧಿಕಾರಿ ಸಿಬ್ಬಂದಿಗಳು ಕೇಂದ್ರ ಸ್ಥಾನ ಬಿಡದಂತೆ ಆದೇಶ:* ಧಾರವಾಡ ಜಿಲ್ಲೆಯಲ್ಲಿ ಸತ ಮಳೆ ಸುರಿಯುತ್ತಿದ್ದು ಭಾರಿ ಮಳೆಯಿಂದ ನೆರೆ ಹಾವಳಿ ಜನ-ಜಾನವಾರು ಜೀವಹಾನಿ, ರಸ್ತೆ ಹಾನಿ, ಸೇತುವೆ ಹಾನಿ, ಸಾರ್ವಜನಿಕ ಆಸ್ತಿ ಹಾನಿಗಳಿಂದ ನಾಗರಿಕ ಮೂಲಭೂತ ಸೌಕರ್ಯಕ್ಕೆ ತೊಂದರೆ ಉಂಟಾಗದಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿದ್ದು ಮಳೆ ಹಾನಿಯಿಂದ ತೊಂದರೆಗೀಡಾದ ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಸರಿಪಡಿಸಿ ಕ್ರಮವಹಿಸುವುದು ಅವಶ್ಯವಿದೆ. ಕಾರಣ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ರಜೆಯ ಮೇಲೆ ತೆರಳಬೇಕಾದಲ್ಲಿ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದು ರಜೆಯ ಮೇಲೆ ತೆರಳತಕ್ಕದ್ದು ಎಂದು ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆಯ ಮುನ್ಸೂಚನೆ ಇರುವುದರಿಂದ, ಜಿಲ್ಲೆಯ ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಅವರ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿದ್ದು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಮಳೆಯಿಂದ ತೊಂದರೆಗೀಡಾಗುವ ನಾಗರಿಕ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಸರಿಪಡಿಸಿ, ಸಾರ್ವಜನಿಕರಿಗೆ, ರೈತರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಅಲ್ಲದೇ, ಎಲ್ಲಾ ಜಿಲ್ಲಾಮಟ್ಟದ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಗಳು ರಜೆಯ ಮೇಲೆ ತೆರಳತಕ್ಕದ್ದಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ರಜೆಯ ಮೇಲೆ ತೆರಳಬೇಕಾದಲ್ಲಿ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದು ರಜೆಯ ಮೇಲೆ ತೆರಳತಕ್ಕದ್ದು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ, 2005 ರನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.

*ಸಾರ್ವಜನಿಕರಿಗೆ ಮಳೆ ಹಾನಿ ಮುನ್ನಚ್ಚರಿಕೆ:* ಮಳೆಯಾಗುವ ಸಂದರ್ಭದಲ್ಲಿ ಗುಡುಗು-ಸಿಡಿಲಿನಿಂದಾಗುವ ಅಹಿತಕರ ಘಟನೆಗಳನ್ನು ತಪ್ಪಿಸಲು ಸಾರ್ವಜನಿಕರು ಮನೆಯಲ್ಲಿಯೇ ಇರಲು ಅಥವಾ ಸುರಕ್ಷಿತ ಸ್ಥಳಗಳಲ್ಲಿರಬೇಕು. ಮಳೆಯಾಗುವ ಸಂದರ್ಭದಲ್ಲಿ ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು. ದನ-ಕರುಗಳನ್ನು ಮೆಯಿಸುವುದು ಮಾಡಬಾರದು. ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸಬಾರದು ಮತ್ತು ಮಳೆ ಹಾನಿಯಿಂದ ಉಂಟಾಗುವ ಇತರೆ ಚಟುವಟಿಕೆ ನಡೆಸದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.

ಭಾರಿ ಮಳೆ, ಪ್ರವಾಹ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿ ವಾಸವಿದ್ದರೆ, ಸುರಕ್ಷತೆ ಇರುವ ಸ್ಥಳಗಳಿಗೆ. ತೆರಳಬೇಕು. ಯುವಕರು ಮತ್ತು ಸಾರ್ವಜನಿಕರು ನದಿ, ಹಳ್ಳ, ಕೆರೆ ದಡಗಳಲ್ಲಿ ಅಪಾಯವಿರುವ ಸೇತುವೆಗಳಲ್ಲಿ ಫೋಟೊ, ಸೆಲ್ಪಿಗಳನ್ನು ತೆಗೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.

ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ, ಇತರೆ ಕಟ್ಟಡಗಳು ಕುಸಿಯುವ ಸಂದರ್ಭವಿರುತ್ತದೆ. ಇದರಿಂದ ಸಾವು ನೋವುಗಳು ಉಂಟಾಗುವದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ತಿಳಿಸಿದೆ ಮತ್ತು ಜಿಲ್ಲಾಡಳಿತ, ತಾಲೂಕಾಡಳಿತದಿಂದ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಸಾರ್ವಾಜನಿಕರು ಪಾಲಿಸಬೇಕೆಂದು ಜಿಲ್ಲಾಡಳಿತ ಕೋರಲಾಗಿದೆ.

*ಸಾರ್ವಜನಿಕರ ತಕ್ಷಣ ಸ್ಪಂದನೆಗೆ 24X7 ತುರ್ತು ಸಹಾಯವಾಣಿ:* ನಿರಂತರ ಮಳೆಯಿಂದಾಗಿ ತೊಂದರೆಗೆ ಒಳಗಾಗುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಿ, ಸಹಾಯ ಮಾಡಲು ಜಿಲ್ಲಾಡಳಿತವು ಜಿಲ್ಲಾಧಿಕಾರಿಗಳ ಕಚೇರಿ ಮತ್ತು ತಾಲ್ಲೂಕು ಆಡಳಿತ ಕಚೇರಿಗಳಲ್ಲಿ ದಿನದ 24 ಗಂಟೆ ಲಭ್ಯವಿರುವ ನಿರಂತರ ಸಹಾಯವಾಣಿಗಳನ್ನು ಆರಂಭಿಸಿದೆ. ಜಿಲ್ಲೆಯ ಸಾರ್ವಜನಿಕರು ಮಳೆಯಿಂದ ಆಗುವ ಹಾನಿ ಹಾಗೂ ತೊಂದರೆಗಳ ಕುರಿತು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ದೂರವಾಣಿ ಸಂಖ್ಯೆ: 0836-2233840, ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ: 0836-2233860, ಅಣ್ಣಿಗೇರಿ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ: 8618405276, ಹುಬ್ಬಳ್ಳಿ ನಗರ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ:0836-2358035, ಅಳ್ನಾವರ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ: 0836-2385544, ನವಲಗುಂದ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ: 08380-229240, ಕುಂದಗೋಳ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ: 08304-290239, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ: 0836-2233844, ಧಾರವಾಡ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ: 0836-2233822, ಕಲಘಟಗಿ ತಹಶೀಲ್ದಾರರ ಕಚೇರಿ ದೂರವಾಣಿ ಸಂಖ್ಯೆ: 08370-284535 ಹಾಗೂ ಅವಳಿನಗರದ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದೂರವಾಣಿ ಸಂಖ್ಯೆ: 0836-2213888 ಮತ್ತು 8277803778 ಗೆ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾಗಿದೆ.

*ಮಳೆ ವಿವರ:* ಅಕ್ಟೋಬರ್ 10 ರ ಬೆಳಿಗ್ಗೆ 8:30 ವರೆಗೆ ಜಿಲ್ಲೆಯಲ್ಲಿ ಆಗಿರುವ ಮಳೆ ವಿವರ ದಾಖಲೆ ಪ್ರಕಾರ ಧಾರವಾಡ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 6.0 ಮೀ.ಮೀ. ಬದಲಾಗಿ 28.0 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಸಾಮನ್ಯ ಮಳೆ 5.0 ಮೀ.ಮೀ. ಬದಲಾಗಿ 23.7 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಕಲಘಟಗಿ ತಾಲ್ಲೂಕಿನಲ್ಲಿ ಸಾಮನ್ಯ ಮಳೆ 4.2 ಮೀ.ಮೀ. ಬದಲಾಗಿ 55.1 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಕುಂದಗೋಳ ತಾಲ್ಲೂಕಿನಲ್ಲಿ ಸಾಮನ್ಯ ಮಳೆ 2.8 ಮೀ.ಮೀ. ಬದಲಾಗಿ 31.5 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ನವಲಗುಂದ ತಾಲ್ಲೂಕಿನಲ್ಲಿ ಸಾಮನ್ಯ ಮಳೆ 3.8 ಮೀ.ಮೀ. ಬದಲಾಗಿ 6.8 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ ಸಾಮನ್ಯ ಮಳೆ 5.3 ಮೀ.ಮೀ. ಬದಲಾಗಿ 32.9 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಅಳ್ನಾವರ ತಾಲ್ಲೂಕಿನಲ್ಲಿ ಸಾಮನ್ಯ ಮಳೆ 4.2 ಮೀ.ಮೀ. ಬದಲಾಗಿ 31.4 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಅಣ್ಣಿಗೇರಿ ತಾಲ್ಲೂಕಿನಲ್ಲಿ ಸಾಮನ್ಯ ಮಳೆ 3.8 ಮೀ.ಮೀ. ಬದಲಾಗಿ 4.9 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸಾಮನ್ಯ ಮಳೆ 4.4 ಮೀ.ಮೀ. ಬದಲಾಗಿ 26.8 ಮೀ.ಮೀ. ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

*ಮಳೆಯಿಂದ ಆಗಿರುವ ಹಾನಿ ವಿವರ:* ಅಕ್ಟೋಬರ್ 9 ರಂದು ಮತ್ತು ಅಕ್ಟೋಬರ್ 10 ರ ಬೆಳಿಗ್ಗೆಯವರಿಗೆ ಆಗಿರುವ ನಿರಂತರ ಮಳೆಯಿಂದಾಗಿ ಯಾವುದೇ ಜೀವ ಹಾನಿ ಆಗಿರುವುದಿಲ್ಲ. ಧಾರವಾಡ ತಾಲ್ಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಒಂದು ಮನೆ ಪೂರ್ಣ ಹಾನಿಯಾಗಿದ್ದು, ಈ ಮನೆಯ ಇಬ್ಬರು ವಾಸಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತು ಧಾರವಾಡ ನಗರದಲ್ಲಿ 5 ಮನೆಯೊಳಗೆ ನೀರು ನುಗ್ಗಿರುವ ಅರ್ಹ ಪ್ರಕರಣಗಳ ವರದಿಯಾಗಿದೆ. ಹಾಗೂ ತಾಲ್ಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿ ಆಗಿವೆ.

ಹುಬ್ಬಳ್ಳಿ ತಾಲ್ಲೂಕಿನ ಅದರಗುಂಜಿ ಗ್ರಾಮದಲ್ಲಿ ಸಣ್ಣ ಜಾನುವಾರು (ಆಡು) ಜೀವ ಹಾನಿ ಆಗಿದೆ. ಕಲಘಟಗಿ ತಾಲ್ಲೂಕಿನಲ್ಲಿ ಒಂದು ಮನೆ ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ 4 ಮನೆಗಳು, ನವಲಗುಂದ ತಾಲ್ಲೂಕಿನಲ್ಲಿ 3 ತೀವ್ರತರ ಹಾಗೂ 6 ಭಾಗಶಃ ಮನೆಗಳು ಹಾನಿಯಾಗಿವೆ ಮತ್ತು ಹುಬ್ಬಳ್ಳಿ ನಗರದಲ್ಲಿ ಎರಡು ಮನೆಗಳು ಭಾಗಶಃ ಹಾನಿಯಾಗಿವೆ. ಅಳ್ನಾವರ, ಹುಬ್ಬಳ್ಳಿ, ಅಣ್ಣಿಗೇರಿ ತಾಲ್ಲೂಕುಗಳಲ್ಲಿ ಯಾವುದೇ ಹಾನಿ ಆಗಿರುವ ವರದಿಯಾಗಿರುವುದಿಲ್ಲ.

ಒಟ್ಟಾರೆಯಾಗಿ ಕಳೆದ ಎರಡು ದಿನಗಳ ಮಳೆಯಿಂದಾಗಿ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಮನೆ ಕುಸಿದು ಸಣ್ಣಪುಟ್ಟ ಗಾಯಗಳಾಗಿವೆ. ಮತ್ತು ಒಂದು ಸಣ್ಣ ಜಾನುವಾರು ಹಾನಿಯಾಗಿದೆ. ಒಂದು ಮನೆ ಪೂರ್ಣವಾಗಿ, ಮೂರು ಮನೆಗಳು ತೀವ್ರತರವಾಗಿ ಹಾಗೂ 23 ಮನೆಗಳು ಭಾಗಶಃ ಸೇರಿ ಒಟ್ಟು 27 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.

ಉದಯ ವಾರ್ತೆ
ಧಾರವಾಡ


Share to all

You May Also Like

More From Author