ನವರಾತ್ರಿಯ 9ನೇ ದಿನ ಇಂದು ಆಯುಧ ಪೂಜೆ. ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಆರಂಭವಾಗಿದೆ. ಚಾಮುಂಡಿ ಬೆಟ್ಟದಲ್ಲಿ ನಸುಕಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ಮೈಸೂರು ರಾಜಮನೆತನಕ್ಕೆ ಇನ್ನೊಂದು ಸಿಹಿ ಸುದ್ದಿ ಬಂದಿದೆ. ಯುವರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಇನ್ನೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೈಸೂರು ಅರಮನೆಗೂ ಮೈಸೂರಿನ ಜನತೆಗೂ ದಸರಾ ಹಬ್ಬದ ಸಂಭ್ರಮ ಇದರಿಂದ ದುಪ್ಪಟ್ಟಾಗಿದೆ.
ಯದುವೀರ್ ಅವರು ಖಾಸಗಿ ದರ್ಬಾರ್ ಚಟುವಟಿಕೆಗಳಲ್ಲಿ ಒಂದು ವಾರದಿಂದ ಭಾಗಿಯಾಗಿದ್ದು. ಶುಕ್ರವಾರ ಆಯುಧಪೂಜೆ ಸಂಭ್ರಮದಲ್ಲಿದ್ದರು. ಈ ವೇಳೆ ಖುಷಿಯ ವಿಚಾರ ಬಂದಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಡೀ ಕುಟುಂಬ ದಸರಾದ ಸಡಗರದಲ್ಲಿದೆ. ಈಗಾಗಲೇ 8 ದಿನ ಖಾಸಗಿ ದರ್ಬಾರ್ ನಡೆಸಿರುವ ಯದುವೀರ್ ಅವರು ಶನಿವಾರ ವಿಜಯದಶಮಿಗೆ ಅಣಿಯಾಗುತ್ತಿದ್ದರು. ಇದರ ನಡುವೆ ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗಿನ ಜಾವ ನವರಾತ್ರಿ ದಿನವೇ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ಅರಮನೆಯಲ್ಲಿದ್ದ ಯದುವೀರ್ ಒಡೆಯರ್ ಅವರಿಗೆ ತಲುಪಿತು. ಇದರಿಂದ ಅವರು ಖುಷಿಗೊಂಡಿದ್ದಾರೆ.