ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆಯಲ್ಲಿ ಮನೆಯ ಹಿರಿಯರು ದೀಪ ಬೆಳಗಿಸಿ ಸಂಭ್ರಮ ಪಟ್ರೆ, ಮಕ್ಕಳು ಹಾಗೂ ಯುವಕರಿಗೆ ಪಟಾಕಿ ಹೊಡೆಯುವ ಸಂಭ್ರಮ. ಆದ್ರೆ ಪಟಾಕಿ ಸಿಡಿಸುವ ಬರದಲ್ಲಿ ಬಾಳಿನ ಬೆಳಕಿಗೆ ಅಂಧಕಾರ ತಂದುಕೊಂಡಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಕಳೆದ 2 ದಿನಗಳಿಂದ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ನಿನ್ನೆ ಆರು ಮಕ್ಕಳು, ಇಬ್ಬರು ವಯಸ್ಕರರು ಗಾಯಗೊಂಡಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ದಾಖಲಾದವರ ಸಂಖ್ಯೆ 22ಕ್ಕೆ ಏರಿಕೆ ಆಗಿದೆ.
ಬೆಂಗಳೂರು ಒಂದರಲ್ಲೇ 30ಕ್ಕೂ ಮಂದಿ ಪಟಾಕಿಯಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ. ನಾರಾಯಣ ನೇತ್ರಾಲಯದಲ್ಲಿ ಪಟಾಕಿಯಿಂದ ಗಾಯಗೊಂಡ 15 ಪ್ರಕರಣಗಳು ದಾಖಲಾಗಿವೆ. 15 ಮಂದಿಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ವೈದ್ಯರು ಕಣ್ಣಿನ ಸರ್ಜರಿಗೆ ಮುಂದಾಗಿದ್ದಾರೆ.
ಅತ್ತ ರಾಯಚೂರಿನಲ್ಲೂ ಪಟಾಕಿ ಅವಘಡ ಸಂಭವಿಸಿದೆ. ಸದರಬಜಾರ್ನಲ್ಲಿ ಪಟಾಕಿ ಕಿಡಿಯಿಂದ ಇಡೀ ಅಂಗಡಿಯೇ ಭಸ್ಮವಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಅದೇ ವೇಳೆ ಭುವನೇಶ್ವರಿ ಮೆರವಣಿಗೆ ಹೊರಟಿತ್ತು. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಒಟ್ಟಾರೆ, ದೀಪಾವಳಿ ಹಬ್ಬದಂದು ಪಟಾಕಿ ಹಚ್ಚುವಾಗ ಎಚ್ಚರ ಅಂತ ವೈದ್ಯರು ಅದೆಷ್ಟೇ ಸಲಹೆ ಕೊಟ್ರೂ ಜನರ ನಿರ್ಲಕ್ಷ್ಯದಿಂದ ಪಟಾಕಿ ಅನಾಹುತಗಳು ಹೆಚ್ಚಾಗುತ್ತಿವೆ.