ಜಿಲ್ಲೆಗೆ 50.298 ಕೋಟಿ ರೂ ಗಳ ಮಧ್ಯಂತರ ಬೆಳೆ ವಿಮೆ ಮಂಜೂರು : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ ಜಿಲ್ಲೆಯ 63566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ವಿಮೆ ಮಂಜೂರು. ಜಿಲ್ಲಾಧಿಕಾರಿ ಗರುದತ್ತ ಹೆಗಡೆ.
ಧಾರವಾಡ:-2023 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಧಾರವಾಡ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗಿತ್ತು.
ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬೆಳೆಗಳಡಿ ನೊಂದಾಯಿಕೊಂಡ ರೈತರಿಗೆ ಮಧ್ಯಂತರ ವಿಮೆ ಜಮಾವಣೆ ಪ್ರಾರಂಭವಾಗಿದೆ.
ಅಳ್ನಾವರ ತಾಲ್ಲೂಕಿನ 3052 ಜನ ರೈತರಿಗೆ 1.82 ಕೋಟಿ ರೂ ಗಳ, ಅಣ್ಣಿಗೇರಿ ತಾಲ್ಲೂಕಿನ 6044 ಜನ ರೈತರಿಗೆ 6.45 ಕೋಟಿ ರೂ ಗಳ, ಧಾರವಾಡ 9978À ಜನ ರೈತರಿಗೆ 6.575 ಕೋಟಿ ರೂ ಗಳ, ಹುಬ್ಬಳ್ಳಿ ತಾಲ್ಲೂಕಿನ 9472 ಜನ ರೈತರಿಗೆ 9.12 ಕೋಟಿ ರೂ ಗಳ, ಹುಬ್ಬಳ್ಳಿ ನಗರ ತಾಲ್ಲೂಕಿನ 301 ಜನ ರೈತರಿಗೆ 0.365 ಕೋಟಿ ರೂ ಗಳ, ಕಲಘಟಗಿ ತಾಲ್ಲೂಕಿನ 15248 ಜನ ರೈತರಿಗೆ 9.731 ಕೋಟಿ ರೂ ಗಳ ಮತ್ತು ನವಲಗುಂದ ತಾಲ್ಲೂಕಿನ 5286 ಜನ ರೈತರಿಗೆ 5.282 ಕೋಟಿ ರೂ ಗಳ ಮಧ್ಯಂತರ ವಿಮಾ ಪರಿಹಾರ ಜಮಾವಣೆಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಯ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿ ಬರ ಪರಿಸ್ಥಿತಿ ನಿರ್ಮಾಣವಾದ ಪ್ರಯುಕ್ತ ಬೆಳೆ ವಿಮೆ ಯೋಜನೆಯಡಿ ಈ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಧ್ಯಂತರ ವಿಮೆ ಪರಿಹಾರ ಪಡೆಯಲು ಅವಕಾಶವಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಕಾಲಿಕ ಕ್ರಮ ಕೈಗೊಂಡ ನಿಮಿತ್ಯ ಜಿಲ್ಲೆಯ 63566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ಬೆಳೆ ವಿಮೆ ಮಂಜೂರಾಗಿದೆ. ವಿಮೆಗೊಳಪಟ್ಟ 56995 ಹೆಕ್ಟೇರ ಪ್ರದೇಶಕ್ಕೆ ವಿಮೆ ಪರಿಹಾರ ದೊರೆಯಲಿದೆ.
ಧಾರವಾಡ ಜಿಲ್ಲೆಯ 111057 ಜನ ರೈತರು ಈ ಯೋಜನೆಯಡಿ ವಿವಿಧ ಬೆಳೆಗಳಿಗೆ ನೊಂದಾಯಿಸಿಕೊಂಡಿರುತ್ತಾರೆ. ಒಟ್ಟು 105065 ಹೆಕ್ಟೇರನಷ್ಟು ಬೆಳೆ ಪ್ರದೇಶ ವಿಮೆ ಯೋಜನೆಗೆ ಒಳಪಟ್ಟಿತ್ತು. ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ, ಆರ್ಥಿಕ ಬೆಂಬಲ ಮತ್ತು ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ನೆರವಾಗುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಉದಯ ವಾರ್ತೆ ಧಾರವಾಡ