ಜೆಸಿಬಿಗೆ ಬಿಆರ್ಟಿಎಸ್ ಬಸ್ ಡಿಕ್ಕಿ: ರೊಚ್ಚಿಗೆದ್ದ ಜನರನ್ನು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ ಸಚಿವ ಸಂತೋಷ್ ಲಾಡ್
ಧಾರವಾಡ:- ಬೈರಿದೇವರ ಕೊಪ್ಪ ಸಮೀಪ ವೇಗವಾಗಿ ಬಂದ ಬಿಆರ್ಟಿಎಸ್ ಬಸ್ ಜೆಸಿಬಿಗೆ ಡಿಕ್ಕಿಯಾದ ನಂತರ ಉಂಟಾಗಿದ್ದ ಗಲಾಟೆಯನ್ನು ಶಮನಗೊಳಿಸಿದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಘಟನೆ ನಡೆದಿದೆ.
ಧಾರವಾಡ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ಸಂತೋಷ್ ಲಾಡ್ ಅವರು ಧಾರವಾಡದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಬೈರಿದೇವರ ಕೊಪ್ಪ ಬಳಿ ವೇಗವಾಗಿ ಬಂದ ಬಿಆರ್ಟಿಎಸ್ ಬಸ್ ಜೆಸಿಬಿಗೆ ಡಿಕ್ಕಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ಸುತ್ತಮುತ್ತಲಿನ ಜನ ಗಲಾಟೆ ಆರಂಭಿಸಿದ್ದರು. ರಸ್ತೆಯನ್ನು ಬ್ಲಾಕ್ ಮಾಡಿ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದ್ದರು. ಇದೇ ವೇಳೆ ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸಂತೋಷ್ ಲಾಡ್ ಅವರು ಘಟನೆಯ ಮಾಹಿತಿ ಪಡೆದು ಜನರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿ ವಾಹನ ಸಂಚಾರ ಆಗುವಂತೆ ಮಾಡಿದರು.
ಸಚಿವ ಸಂತೋಷ್ ಲಾಡ್ ಅವರ ಈ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸದಾ ಜನರ ಸಂಕಷ್ಟಕ್ಕೆ ಮಿಡಿಯುವ ಸಂತೋಷ್ ಲಾಡ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಅವರನ್ನು ಕೊಂಡಾಡಿದ್ದಾರೆ.
ಕಳೆದ ತಿಂಗಳು ಧಾರವಾಡದ ಕೆಲಗೇರಿ ಸೇತುವೆ ಬಳಿ ಮೂರು ಬೈಕ್ಗಳ ನಡುವೆ ಅಪಘಾತ ಸಂಭವಿಸಿ ಗಾಯಗೊಂಡವರನ್ನು ಲಾಡ್ ಅವರು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದನ ಸ್ಮರಿಸಬಹುದು.