ರಾಜ್ಯಕ್ಕೆ ದಿಕ್ಸೂಚಿ ಆಗಲಿರುವ ಸಿದ್ದು ಬಜೆಟ್.ಡಿ.ಕೆ ಶಿವಕುಮಾರ.
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ರಾಜ್ಯಕ್ಕೆ ದಿಕ್ಸೂಚಿ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಅನುಷ್ಠಾನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತೋರಿಸಿದ್ದ ಬದ್ಧತೆಯನ್ನೇ ಬಜೆಟ್‌ನಲ್ಲಿ ತೋರಿಸಲಾಗುವುದು. ರಾಜ್ಯದ ಜನರಿಗೆ ಶಕ್ತಿ ತುಂಬಲು, ಅವರನ್ನು ಸಶಕ್ತರನ್ನಾಗಿಸಲು ಹಲವು ವಿಶೇಷ ಘೋಷಣೆಗಳು ಆಗಲಿವೆ. ನೀರಾವರಿ ಹಾಗೂ ಉದ್ಯಮ ವಲಯಕ್ಕೆ ಸಾಕಷ್ಟು ಪ್ರಾದ್ಯಾನ್ಯತೆ ನೀಡಲಾಗಿದೆ ಎಂದರು.
ಲೋಕಸಭೆ ಟಿಕೆಟ್ ಹಂಚಿಕೆ ವಿಚಾರ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಎಲ್ಲರನ್ನೂ ಸಮಾಧಾನ ಮಾಡಲು ಆಗುವುದಿಲ್ಲ. ವ್ಯಕ್ತಿಗತ ಆಯ್ಕೆ ತಡೆಯುವ ನಿಟ್ಟಿನಲ್ಲಿ ಸರ್ವೆ ವರದಿ ಮತ್ತು ವರಿಷ್ಠರ ಸೂಚನೆಯ ಮೇರೆಗೆ ಟಿಕೆಟ್ ಹಂಚಿಕೆ ಮಾಡಲಾಗುವುದು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಲೂಟಿ ಯೋಜನೆಗಳು ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಂಮತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ ಡಿಕೆಶಿ, ಜನ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ.
ಮಹಾದಾಯಿ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಯೋಜನೆ ಅನುಷ್ಠಾನ ಆಗಿಯೇ ಬಿಟ್ಟಿತು ಎಂಬಂತೆ ಈ ಭಾಗದ ಬಿಜೆಪಿ ನಾಯಕರು ಕುಣಿದು ಕುಪ್ಪಳಿಸಿದ್ದರು. ಈಗ ಅವರೇ ಇದಕ್ಕೆ ಉತ್ತರ ನೀಡಬೇಕು ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಹರಹಾಯ್ದರು.