ನವದೆಹಲಿ:- ದೇಶದಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಎಲ್ಲೆಡೆ ತನ್ನ ನರ್ತನ ತೋರುತ್ತಿದ್ದಾನೆ. ಅಲ್ಲದೇ ಭಾರೀ ಮಳೆಯಿಂದ ದೇಶದ ನಾನಾ ರಾಜ್ಯಗಳಲ್ಲಿ ಸಾಕಷ್ಟು ಅನಾಹುತಗಳು ನಡೆಯುತ್ತಿದೆ.ಅದರಂತೆ ನವದೆಹಲಿಯಲ್ಲಿ ಒಂದು ಅವಾಂತರ ಜರುಗಿದ್ದು, ವಿದ್ಯಾರ್ಥಿಗಳ ಪಾಡು ಹೇಳತ್ತೀರದಾಗಿದೆ. ದೆಹಲಿಯಲ್ಲಿ ಶನಿವಾರ ಸುರಿದ ಭಾರೀ ಮಳೆಯ ನಂತರ ರಾಜೇಂದ್ರ ನಗರದಲ್ಲಿರುವ ರಾವ್ ಐಎಎಸ್ ಅಕಾಡೆಮಿಯ ನೆಲಮಾಳಿಗೆ ಜಲಾವೃತವಾಗಿತ್ತು. ಈ ದುರಂತದಲ್ಲಿ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿದೆ. ರಕ್ಷಣಾ ಕಾರ್ಯಾಚರಣೆ ಆರಂಭವಾದ ಕೆಲವೇ ಗಂಟೆಗಳ ನಂತರ ಇಬ್ಬರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆಯಾಗಿವೆ. ಬಳಿಕ ವಿದ್ಯಾರ್ಥಿಯ ಶವ ಹೊರತೆಗೆಯಲಾಯಿತು. ಅಪಘಾತದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ.
ರಕ್ಷಣಾ ತಂಡವು ನೆಲಮಾಳಿಗೆಯಿಂದ ಮೂರನೇ ದೇಹವನ್ನು ಹೊರತೆಗೆದಿದೆ ಎಂದು ದೆಹಲಿ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಇದಾದ ಬಳಿಕ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಡಿಸಿಪಿ ಹರ್ಷವರ್ಧನ್ ತಿಳಿಸಿದ್ದಾರೆ.ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನೀರನ್ನು ಹೊರಕ್ಕೆ ಹಾಕಲಾಗುತ್ತಿದೆ. ನೆಲಮಾಳಿಗೆಯಲ್ಲಿ ಇನ್ನೂ ಸುಮಾರು 7 ಅಡಿ ನೀರಿದೆ, ಹೀಗಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರದಂತೆ ನಾನು ವಿನಂತಿಸುತ್ತೇನೆ. ಇದು ರಕ್ಷಣಾ ಸೇವೆಗಳಿಗೆ ಅಡ್ಡಿಯಾಗುತ್ತದೆ, ಆದರೆ ಸ್ಥಳಕ್ಕೆ ಬರುವುದು ಪರಿಹಾರವಲ್ಲ” ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ದೇಶದಾದ್ಯಂತ ಮಳೆಯು ತನ್ನ ರೌದ್ರ ನರ್ತನ ತೋರುತ್ತಿದ್ದು, ಇನ್ನೆಷ್ಟು ಅನಾಹುತ ಸಂಭವಿಸುತ್ತೋ ದೇವರೇ ಬಲ್ಲ.