ವರ್ಷದ ಯಾವುದೇ ಸೀಸನ್ನಲ್ಲಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಎಲ್ಲ ಹಣ್ಣುಗಳಿಗೆ ಹೋಲಿಕೆ ಮಾಡಿದ್ರೂ ಮಾರ್ಕೆಟ್ನಲ್ಲಿ ಇದರ ದರ ಸ್ವಲ್ಪ ಕಡಿಮೆಯೇ ಇರುತ್ತದೆ. ಹೀಗಾಗಿ ಪಟ್ಟಣಕ್ಕೆ ಹೋಗಿ ವಾಪಸ್ ಬರುವಾಗ ಒಂದು ಡಜನ್ ಬಾಳೆಹಣ್ಣು ತರುವುದು ಈಗಲೂ ಹಳ್ಳಿಗಳಲ್ಲಿ ವಾಡಿಕೆ ಇದೆ. ಯಾಕಂದ್ರೆ ಬಾಳೆಹಣ್ಣಿನ ಸೇವನೆ ನಮ್ಮ ದೇಹವನ್ನು ಹಲವಾರು ಕಾಯಿಲೆಗಳಿಂದ ಕೊಡ ಕಾಪಾಡುತ್ತದೆ. ಆದ್ರೆ ಅತಿಯಾಗಿ ಬಾಳೆಹಣ್ಣು ತಿನ್ನುವುದು ಹಲವಾರು ಆರೋಗ್ಯ ಸಮಸ್ಯೆಗಳಿಗೂ ನಾಂದಿಯಾದೀತು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಹೆಚ್ಚು ಬಾಳೆಹಣ್ಣು ತಿಂದರೆ ಆಗುವ ಅಡ್ಡ ಪರಿಣಾಮಗಳೇನು ಎಂಬುದನ್ನು ನೋಡೋಣ.
ತೂಕ ಹೆಚ್ಚಾಗುತ್ತದೆ
ಒಂದು ಸಾಧಾರಣ ಗಾತ್ರದ ಬಾಳೆಹಣ್ಣಿನಲ್ಲಿ ೧೦೫ ಕ್ಯಾಲರಿ ಇರುತ್ತದೆ. ಇದು ಕಿತ್ತಳೆ, ಕಲ್ಲಂಗಡಿ ಅಥವಾ ದ್ರಾಕ್ಷಿಯಂತಹ ಹಣ್ಣುಗಳಿಗೆ ಹೋಲಿಸಿದರೆ ಬಹಳ ಹೆಚ್ಚು. ಹಾಗಾಗಿ ಕಡಿಮೆ ಕ್ಯಾಲರಿ ಆಹಾರದ ಬಗ್ಗೆ ನಿಮಗೆ ಯೋಚನೆಯಿದ್ದರೆ ಖಂಡಿತ ಬಾಳೆಹಣ್ಣನ್ನು ನಿಮ್ಮ ಡಯಟ್ನಿಂದ ಹೊರಗಿಡಬಹುದು. ಇದರಿಂದ ತೂಕ ಹೆಚ್ಚಾಗುತ್ತದೆ.
ಮೈಗ್ರೇನ್
ನಿಮಗೆ ಆಗಾಗ ಮೈಗ್ರೇನ್ ಸಂಬಂಧಿ ತಲೆನೋವು ಆಗುತ್ತಿದ್ದರೆ, ಆ ತೊಂದರೆ ಎದುರಿಸುತ್ತಿದ್ದರೆ ಬಾಳೆಹಣ್ಣು ಒಳ್ಳೆಯದಲ್ಲ. ಚೀಸ್, ಮೀನು, ಮಾಂಸ ಹಾಗೂ ಬಾಳೆಹಣ್ಣಿನಲ್ಲಿರುವ ಟೈರಮಿನ್ ಅಂಶ ಮೈಗ್ರೇನ್ ತಲೆನೋವಿಗೆ ಒಳ್ಳೆಯದಲ್ಲ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಇನ್ನೂ ಹೆಚ್ಚಿನ ಟೈರಮಿನ್ ಇರುವುದರಿಂದ ಅಂಥವರು ಸಿಪ್ಪೆಯ ಬಗ್ಗೆ ಎಚ್ಚರಿಕೆ ಹೊಂದಿರಬೇಕು.
ಹೈಪರ್ಕಲೇಮಿಯ
ದೇಹದಲ್ಲಿ ಪೊಟಾಶಿಯಂ ಪ್ರಮಾಣ ಹೆಚ್ಚಾದರೆ ಸುಸ್ತು, ಏರಿಳಿವ ಪಲ್ಸ್ ರೇಟ್, ಹೃದಯ ಬಡಿತದಲ್ಲಿ ಏರಿಳಿತ ಮತ್ತಿತರ ತೊಂದರೆಗಳು ಆರಂಭವಾಗುತ್ತದೆ. ಹಾಗಾಗಿ ಪೊಟಾಶಿಯಂ ಪ್ರಮಾಣವನ್ನು ಸರಿಯಾಗಿ ಇಟ್ಟುಕೊಳ್ಳಲೇಬೇಕಾದಂಥ ಮಂದಿ, ಹೃದಯದ ತೊಂದರೆಯಿದ್ದವರು ಬಾಳೆಹಣ್ಣನ್ನು ಸೇವಿಸಬಾರದು.
ಹಲ್ಲು ಹಾಳಾಗುವುದು
ಅತಿಯಾದ ಸ್ಟಾರ್ಚ್ ಇರುವುದರಿಂದ ಬಾಳೆಹಣ್ಣು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವೊಂದು ಅಧ್ಯಯನಗಳ ಪ್ರಕಾರ ಚಾಕೋಲೇಟು, ವೇಫರ್ ಮತ್ತಿತರ ತಿನಿಸುಗಳು ಬಾಯಿಯ ಆರೋಗ್ಯದ ದೃಷ್ಟಿಯಿಂದ ನೀಡುವ ತೊಂದರೆಗಿಂತ ಹೆಚ್ಚು ತೊಂದರೆ ಬಾಳೆಹಣ್ಣು ನೀಡಬಹುದು. ಹಲ್ಲು ಹಾಳಾಗಲು ಇದರ ಕೊಡುಗೆ ದೊಡ್ಡದು. ಕ್ಯಾವಿಟಿಯಂತಹ ತೊಂದರೆಗಳು ಕಟ್ಟಿಟ್ಟ ಬುತ್ತಿ.
ಮಂಪರು
ಹೆಚ್ಚಿನ ಮಂದಿ ಬೆಳಗ್ಗೆ ಒಂದು ಬಾಳೆಹಣ್ಣು ತಿನ್ನುವ ಮೂಲಕ ದಿನ ಆರಂಭ ಮಾಡುತ್ತಾರೆ. ಆದರೆ ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫನ್ ಹಾಗೂ ಅಮೈನೋ ಆಸಿಡ್ಗಳು ಮೆದುಳಿನ ಕೆಲಸದ ಚುರುಕುತನವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಬೆಳಗ್ಗೆಯೇ ನಿಮಗೆ ಮಂಪರಿನಂತೆ ಅನಿಸಿ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಬಹುದು.
ಮಲಬದ್ಧತೆ
ಬಾಳೆಹಣ್ಣು ಮಲಬದ್ಧತೆಗೆ ಉತ್ತಮ ಪರಿಹಾರ ಎಂಬ ಮಾತಿದೆ. ಇದು ಸುಳ್ಳಲ್ಲ. ಆದರೆ ಬಾಳೆಹಣ್ಣು ಸರಿಯಾಗಿ ಹಣ್ಣಾಗದಿದ್ದಲ್ಲಿ ಅದು ಮಲಬದ್ಧತೆಯನ್ನು ತರುತ್ತದೆ. ಹಾಗಾಗಿ ಇಂತಹ ಸಂದರ್ಭ ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಬಳಸಬೇಕು.
ಗ್ಯಾಸ್
ಹೆಚ್ಚು ಬಾಳೆಹಣ್ಣು ತಿನ್ನುವುದರಿಂದಲೂ ಗ್ಯಾಸ್ ಆಗುತ್ತದೆ. ದೇಹದಲ್ಲಿ ಸರಿಯಾಗಿ ಜೀರ್ಣಕ್ರಿಯೆ ನಡೆಯದೆ ಅದು ಗ್ಯಾಸ್ನಂತಹ ತೊಂದರೆಗಳಿಗೆ ಈಡಾಗಬೇಕಾಗುತ್ತದೆ.
ಮಧುಮೇಹ
ಸಕ್ಕರೆ ಕಾಯಿಲೆ ಹೊಂದಿದವರಿಗೆ ಬಾಳೆಹಣ್ಣು ಒಳ್ಳೆಯದಲ್ಲ. ಇದರ ಸೇವನೆಯಿಂದ ದೇಹದಲ್ಲಿನ ಸಕ್ಕರೆ ಪ್ರಮಾಣದಲ್ಲಿ ದಿಢೀರ್ ಏರಿಕೆಯಾಗಿ ಮಧುಮೇಹಿಗಳಿಗೆ ಇನ್ನೂ ತೊಂದರೆಯಾಗಬಹುದು.
ಉಸಿರಾಟದ ಸಮಸ್ಯೆ
ಉಸಿರಾಟದ ತೊಂದರೆಗಳು ಇರುವವರಿಗೆ ಬಾಳೆಹಣ್ಣು ಒಳ್ಳೆಯದಲ್ಲ. ಇದು ಅವರಲ್ಲಿ ಅಲರ್ಜಿ ಉಂಟುಮಾಡುವುದಲ್ಲದೆ, ನುಂಗುವುದು ಹಾಗೂ ಉಸಿರಾಡುವುದಕ್ಕೆ ತೊಂದರೆಗಳಾಗಬಹುದು.