ಶಿವಮೊಗ್ಗ: ಶಿವಮೊಗ್ಗದ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ. ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.
ನಿನ್ನೆ ಬುಧವಾರ ಜ್ಯೂಸ್ ಬಾಟಲಿ ಹಿಡಿದುಕೊಂಡು ಮಗು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಾಟೆಲ್ ಮುಚ್ಚಳ ನುಂಗಿದ ಕೂಡಲೇ ಮಗು ಉಸಿರಾಡಲು ಆಗದೆ ಒದ್ದಾಡಿದೆ, ಜೋರಾಗಿ ಅಳುವ ಸದ್ದು ಕೇಳಿ ಪೋಷಕರು ಬಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದಾಗಲೇ ಮಗು ಜೀವ ಬಿಟ್ಟಿತ್ತು. ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.