ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ನ್ಯಾಯಾಧೀಶರು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಈ ಮಧ್ಯೆ ಇಂದು ಮುನಿರತ್ನ ಪೊಲೀಸ್ ಕಸ್ಟಡಿ ಅಂತ್ಯ ಆಗಲಿದ್ದು, ಕಸ್ಟಡಿ ವಿಸ್ತರಣೆ ಆಗುವ ಸಾಧ್ಯತೆ ಇದೆ. ಶನಿವಾರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿ ಕರೆತಂದರು. ರಾತ್ರಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
ಗುತ್ತಿಗೆದಾರ ಚಲುವರಾಜುಗೆ ಜಾತಿನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಶಾಸಕ ಮುನಿರತ್ನ ಬಂಧನ ಆಗಿದ್ದು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮೊನ್ನೆ ರಾತ್ರಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದ ಪೊಲೀಸರು, ಒಂದು ವಾರ ಕಸ್ಟಡಿಗೆ ಕೇಳಿದ್ದರು. ಆದ್ರೆ ನ್ಯಾಯಾಧೀಶರು 2 ದಿನವಷ್ಟೇ ಕಸ್ಟಡಿಗೆ ನೀಡಿದ್ದರು. ಇಂದಿಗೆ ಮುನಿರತ್ನ ಕಸ್ಟಡಿ ಅಂತ್ಯ ಆಗಲಿದ್ದು, ಕೋರ್ಟ್ಗೆ ಪ್ರೊಡ್ಯೂಸ್ ಮಾಡಲಿದ್ದಾರೆ. ಕೋರ್ಟ್ ಬಹುತೇಕ ಪೊಲೀಸ್ ಕಸ್ಟಡಿ ಅವಧಿ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ.
ಈ ನಡುವೆ ಕಸ್ಟಡಿ ಪಡೆದ ತನಿಖಾಧಿಕಾರಿಗಳು ಶಾಸಕ ಮುನಿರತ್ನ ವಿಚಾರಣೆ ತೀವ್ರಗೊಳಿಸಿದ್ದಾರೆ. ಎಷ್ಟೇ ವಿಚಾರಣೆ ಮಾಡಿದ್ರೂ ನಾನೇನು ತಪ್ಪು ಮಾಡಿಲ್ಲ ಅಂತ ಅಲವತ್ತುಕೊಂಡಿದ್ದಾರೆ. ಎಸಿಪಿ ಪ್ರಕಾಶ್ ರೆಡ್ಡಿಯಿಂದ ಮುನಿರತ್ನ ವಿಚಾರಣೆ ನಡೆದಿದೆ. ಚೆಲುವರಾಜು ಹೇಗೆ ಪರಿಚಯ, ಆಡಿಯೋದಲ್ಲಿರೋದು ನಿಮ್ಮ ಧ್ವನಿನಾ ಅಂತ ಪ್ರಶ್ನೆಗಳನ್ನ ಕೇಳಿದ್ದಾರೆ. ಆದ್ರೆ ನಾನೇನು ತಪ್ಪು ಮಾಡಿಲ್ಲ. ಇದು ರಾಜಕೀಯ ಷಡ್ಯಂತ್ರ ಅಂತ ಮುನಿರತ್ನ ಹೇಳಿದ್ದಾರೆ. ಇನ್ನು ಚೆಲುವರಾಜು, ವೇಲು ನಾಯ್ಕ್ ಇಬ್ಬರೂ ಜೊತೆಯಲ್ಲಿದ್ದು, ಉಂಡ ಮನೆಗೆ ಎರಡು ಬಗೆದಿದ್ದಾರೆ ಅಂತ ಹೇಳ್ಕೊಂಡಿದ್ದಾರೆ.
ಏನಿದು ಮುನಿರತ್ನ ಪ್ರಕರಣ?
ಗುತ್ತಿಗೆದಾರ ಚಲುವರಾಜು ಎಂಬವರು ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದಲ್ಲದೆ, ರಕ್ಷಣ ನೀಡುವಂತೆ ಮನವಿ ಮಾಡಿದ್ದರು. ಜೀವ ಬೆದರಿಕೆ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಪ್ರಮುಖ ಆರೋಪಿ ಶಾಸಕ ಮುನಿರತ್ನ ಆಗಿದ್ದಾರೆ. ಎ2 ಮುನಿರತ್ನರ ಆಪ್ತ ಸಹಾಯಕ ವಿಜಯ್ ಕುಮರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ.
ಶಾಸಕ ಮುನಿರತ್ನ ಸೆಪ್ಟೆಂಬರ್ 9 ರಂದು 20 ಲಕ್ಷ ರೂಪಾಯಿ ಹಣ ಕೇಳಿದ್ದರು. ದುಡ್ಡು ಕೊಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇಷ್ಟೇ ಅಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಮುನಿರತ್ನ ಅವರಿಗೆ ನೋಟಿಸ್ ನೀಡಲು ವೈಯಾಲಿಕಾವಲ್ ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ, ಅಷ್ಟರಲ್ಲಾಗಲೇ ಮುನಿರತ್ನ ನಾಪತ್ತೆಯಾಗಿದ್ದರು.