ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ 17 ಕಳ್ಳತನ ಕೇಸ್ನಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆ ಪೊಲೀಸರಿಂದ ಗುಂಡಿನ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ವಿನೋದ್ ಗುಡಿಹಾಳ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹುಬ್ಬಳ್ಳಿ ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಾಹನಗಳನ್ನು ತಡೆದು ತಲ್ವಾರ್ ತೋರಿಸಿ ಚಿನ್ನಾಭರಣ, ಹಣ ಸೇರಿದಂತೆ ಮೊಬೈಲ್ ಫೋನ್ಗಳನ್ನು ದೋಚುತ್ತಿದ್ದ ನಟೋರಿಯಸ್ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಅರೆಸ್ಟ್ ಮಾಡಿದ್ದಾರೆ.
ಕಳ್ಳತನ ಪ್ರಕರಣದಲ್ಲಿ ನಿನ್ನೆ ವಿನೋದ್ನನ್ನು ಪೊಲೀಸರು ಬಂಧಿಸಿದ್ದರು. ತನ್ನ ಸಹಚರರನ್ನು ತೋರಿಸುತ್ತೇನೆಂದು ಕರೆದೊಯ್ದಿದ್ದ ವಿನೋದ್, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.ಬೆಂಡಿಗೇರಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಯಶ್ರೀ ಛಲವಾದಿ, ಕಾನ್ಸ್ಟೇಬಲ್ ರಮೇಶ್ ಹಿತ್ತಲಮನಿ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದ. ಆತ್ಮರಕ್ಷಣೆಗಾಗಿ ವಿನೋದ್ ಕಾಲಿಗೆ ಪಿಐ ಜಯಶ್ರೀ ಗುಂಡು ಹಾರಿಸಿದ್ದರು. ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಸುದ್ದಿಗಾರರ ಜೊತೆಗೆ ಮಾತನಾಡಿ, ಪ್ರಕರಣ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.