ಬೆಂಗಳೂರು: ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ವಾದ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ವಾದ ಅಲ್ಲ. ಯಾಕೆಂದರೆ ಸಾವರ್ಕರ್ ರಾಷ್ಟ್ರೀಯವಾದಿ ಆಗಿದ್ದರೂ, ಅವರ ಮೂಲಭೂತವಾದ ದೇಶಕ್ಕೆ ವಿರುದ್ಧವಾಗಿದೆ.
ಮತ್ತು ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆ, ಸಾವರ್ಕರ್ ವಾದದಿಂದ ಪ್ರಭಾವಿತರಾಗಿದ್ದರು. ಸಾವರ್ಕರ್ ಅವರಲ್ಲಿದ್ದ ಚಿಂತನೆಗಳು, ರಾಷ್ಟ್ರೀಯವಾದಿ ಚಿಂತನೆಗಳ ರೀತಿ ಕಂಡರೂ ಪ್ರಜಾಪ್ರಭುತ್ವದ ಪರವಾದ ವ್ಯಕ್ತಿತ್ವ ಅವರದ್ದಲ್ಲ ಎಂದು ಹೇಳಿದರು.
ಇನ್ನೂ ಮೂಲಭೂತವಾದದ ವಿರುದ್ಧದ ಹೋರಾಟದಲ್ಲಿ ಈ ಅಂಶವನ್ನು ಅರಿತು ನಾವು ಮುಂದೆ ಸಾಗಬೇಕಿದೆ. “ಗಾಂಧೀಜಿಯ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ” ಪುಸ್ತಕ ಗಾಂಧೀಜಿಯವರ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಬೆಳಕು ಚಲ್ಲಿದೆ. ಯಾರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸದೇ, ವಿವರಗಳನ್ನ ಮಾತ್ರ ನೀಡಿರುವುದು ಪುಸ್ತಕದ ವಿಶೇಷ ಎಂದು ತಿಳಿಸಿದರು.