ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡವು 9 ರನ್‌ಗಳ ಸೋಲು ಕಂಡಿದ್ದು, ಸೆಮಿಫೈನಲ್ ಕನಸು ಬಹುತೇಕ ಭಗ್ನಗೊಂಡಿದೆ. ಆಸ್ಟ್ರೇಲಿಯಾ ನೀಡಿದ್ದ 152 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 142 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತ್ತು. ಕೇವಲ 19 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಗ್ರೇಸ್ ಹ್ಯಾರಿಸ್ 40 ರನ್ ಗಳಿಸಿ ಚೇತರಿಕೆ ತಂದರು. ತಾಲಿಯಾ ಮೆಕ್‌ಗ್ರಾತ್, ಎಲ್ಲಿಸ್ ಪೆರ್ರಿ ತಲಾ 32 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.
ಆಸೀಸ್ ಒಡ್ಡಿದ 152 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 20 ಓವರ್‌ಗಳಿಗೆ ಕೇವಲ 142 ರನ್ ಗಳಿಸಿ ಸೋಲನುಭವಿಸಿತು. ಕ್ಯಾಪ್ಟನ್ ಹರ್ಮನ್‌ಪ್ರೀತ್ ಔಟಾಗದೇ ಅರ್ಧಶತಕ (54) ಬಾರಿಸಿದರು. ದೀಪ್ತಿ ಶರ್ಮಾ (29), ಶಫಾಲಿ ವರ್ಮಾ (20) ರನ್ ಗಳಿಸಿ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಆದರೆ, ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.
ಹೀಗಾಗಿ ಸೋಲನ್ನು ಅನುಭವಿಸಬೇಕಾಯಿತು. ಈ ಸೋಲಿನೊಂದಿಗೆ ಭಾರತವು 2 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದೆ ಮತ್ತು ಉತ್ತಮ ನೆಟ್ ರನ್ ರೇಟ್ ಆಧಾರದ ಮೇಲೆ ಎ ಗುಂಪಿನಲ್ಲಿ ನ್ಯೂಜಿಲೆಂಡ್‌ಗಿಂತ ಮೇಲೆ ಅಂದರೆ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಕೂಡ 2 ಗೆಲುವಿನಿಂದ ನಾಲ್ಕು ಅಂಕಗಳನ್ನು ಹೊಂದಿದೆ, ಆದರೆ ಅದರ ನೆಟ್ ರನ್ ರೇಟ್ ಭಾರತಕ್ಕಿಂತ ಕಡಿಮೆಯಾಗಿದೆ.
ಇಂದು ನಡೆಯಲಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ನೆಟ್ ರನ್ ರೇಟ್ ಮೈನಸ್‌ನಲ್ಲಿರುವ ಪಾಕಿಸ್ತಾನದ ಗೆಲುವಿಗೆ ಭಾರತ ತಂಡ ಪ್ರಾರ್ಥಿಸುತ್ತದೆ. ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದ್ದರೆ, ಉತ್ತಮ ರನ್ ರೇಟ್ ನೆರವಿನಿಂದ ಭಾರತ ಸುಲಭವಾಗಿ ಸೆಮಿಫೈನಲ್ ತಲುಪಲಿದೆ.