ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ.
ಬೆಂಗಳೂರಿನ ಸುತ್ತ ಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ನಾಳೆ ನಿಗದಿತ ಸಮಯಕ್ಕೆ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಹವಾಮಾನ ವರದಿ ಪ್ರಕಾರ, ಬುಧವಾರ ಬೆಂಗಳೂರಿನಲ್ಲಿ ಶೇ.100 ರಷ್ಟು ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ 41% ಮಳೆಯಾಗಲಿದೆ. ಬೆಳಿಗ್ಗೆಯಿಂದಲೇ ತುಂತುರು ಮಳೆ ಶುರುವಾಗುವುದರಿಂದ ಪಂದ್ಯವು ತಡವಾಗಿ ಆರಂಭಗೊಳ್ಳುವ ಸಾಧ್ಯತೆಯಿದೆ.
ಇನ್ನು ಎರಡನೇ ದಿನದಾಟಕ್ಕೂ ವರುಣ ಅಡ್ಡಿಪಡಿಸಲಿದ್ದಾನೆ. ಗುರುವಾರ ಮಧ್ಯಾಹ್ನಯಿಂದ ಬೆಂಗಳೂರಿನಲ್ಲಿ ಶೇ.40ರಷ್ಟು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾಗೆಯೇ ಮೂರನೇ ದಿನದಾಟದ ವೇಳೆ 67% ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ.
ಕೊನೆಯ ಎರಡು ದಿನದಾಟಗಳಲ್ಲಿ ಕ್ರಮವಾಗಿ 25% ಮತ್ತು 24% ರಷ್ಟರ ಮಳೆಯ ಸಂಭವನೀಯತೆ ಇದೆ. ಅಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಪೂರ್ಣ ದಿನದಾಟಗಳು ನಡೆಯುವುದು ಅನುಮಾನ. ಅಲ್ಲದೆ ಪಂದ್ಯ ನಡೆದರೂ ಮಳೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.