ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರಿಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿಲ್ಲ. ಇದು ಅವರನ್ನು ಮತ್ತಷ್ಟು ಕಂಗೆಡಿಸಿದೆ. ದರ್ಶನ್ ಅವರು ಜಾಮೀನಿಗಾಗಿ ಸಾಕಷ್ಟು ಚಡಪಡಿಸಿದ್ದರು. ಈಗ ಅವರು ಮತ್ತಷ್ಟು ದಿನ ಜೈಲಿನಲ್ಲೇ ಕಳೆಯಬೇಕಿದೆ. ಈ ಮಧ್ಯೆ ಕೋಡಿಮಠದ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಟ ದರ್ಶನ ತೂಗುದೀಪ ಬಗ್ಗೆ ಮಾರ್ಮಿಕವಾಗಿ ಭವಿಷ್ಯವನ್ನು ನುಡಿದಿದ್ದಾರೆ. ಮಾಡಿದ ಪಾಪವನ್ನು ಅನುಭವಿಸಲೇಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಈ ಹಿಂದೆ, ಅತಿವೃಷ್ಟಿ ಇನ್ನೂ ನಿಂತಿಲ್ಲ ಅದರ ಅಬ್ಬರ ಜೋರಾಗಲಿದೆ, ಗುಡ್ಡಗಳು ಕುಸಿಯಲಿವೆ ಎಂದು ಶ್ರೀಗಳು ಹೇಳಿದ್ದರು. ಅದರಂತೆಯೇ, ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಪಕ್ಕದ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಇನ್ನು, ಕೇರಳದ ವಯನಾಡ್ ನಲ್ಲಿ ಗುಡ್ಡ ಕುಸಿತದಿಂದ ಸಾಕಷ್ಟು ಸಾವುನೋವು ಆಗಿದ್ದು ಗೊತ್ತೇ ಇದೆ.
ಮುಡಾ ಕೇಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಎಫ್ಐಆರ್ ದಾಖಲಾದ ನಂತರ, ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಯಾಗುತ್ತಿದೆ. ಮುಖ್ಯಮಂತ್ರಿಗಳ ಬದಲಾವಣೆ ಎನ್ನುವ ಚರ್ಚೆ ಸದ್ಯ ತಕ್ಕಮಟ್ಟಿಗೆ ಕಮ್ಮಿಯಾಗುತ್ತಿದೆ. ಮುಖ್ಯಮಂತ್ರಿಗಳು ಮತ್ತು ಅವರ ಪತ್ನಿ ಪಾರ್ವತಿಯವರು ಮುಡಾ ನಿವೇಶನವನ್ನು ಹಿಂದಿರುಗಿಸಿದ್ದ ಬಗ್ಗೆ ಮಾರ್ಮಿಕವಾಗಿ ಕೋಡಿಶ್ರೀಗಳು ಹೇಳಿಕೆಯನ್ನು ನೀಡಿದ್ದಾರೆ. ಅವರಿಗೆ ದೈವಬಲವಿಲ್ಲ ಎನ್ನುವ ಮೂಲಕ, ಅವರ ಕುರ್ಚಿ ಅಲುಗಾಡುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುವಂತೆ ಮಾಡಿದ್ದಾರೆ.