ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಸಂಕಷ್ಟ ಎದುರಾಗಿದೆ. ಸಚಿವ ದಿನೇಶ್ ಗುಂಡೂರಾವ್ ಪತ್ನಿ ತಬಸುಮ್ ಸಲ್ಲಿಸಿದ್ದ ಖಾಸಗಿ ದೂರನ್ನು ಆಗಸ್ಟ್ 29 ರಂದು ಮಾನ್ಯ ಮಾಡಿದ್ದ ನ್ಯಾಯಾಲಯ ಶಾಸಕ ಯತ್ನಾಳ್ ಅಕ್ಟೋಬರ್ 16 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು.
ವಿಚಾರಣೆಗೆ ಶಾಸಕ ಯತ್ನಾಳ್ ಗೈರಾಗಿದ್ದರು. ಆರೋಪಿಯ ಈ ನಡೆ ಗಂಭೀರವಾಗಿ ಪರಿಗಣಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28 ಕ್ಕೆ ಮುಂದೂಡಿದೆ.
ಅಕ್ಟೋಬರ್ 28ರ ಒಳಗೆ ವಾರೆಂಟ್ ಜಾರಿಗೆ ಆದೇಶ ಹೊರಡಿಸಿದ್ದಾರೆ. ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಅವರು ದೂರು ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಯಾವ ಕ್ಷಣದಲ್ಲಾದರೂ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಯತ್ನಾಳ್ ‘ದಿನೇಶ್ ಗುಂಡೂರಾವ್ ಮನೆಯಲ್ಲಿಅರ್ಧ ಪಾಕಿಸ್ತಾನ ಇದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತು ತಬಸುಮ್ ಅವರು ಯತ್ನಾಳ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಜತೆಗೆ, ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಖಾಸಗಿ ದೂರು ದಾಖಲಿಸಿದ್ದರು.