ಪ್ರಲ್ಹಾದ್ ಜೋಶಿ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಆರೋಪ: ಮಹೇಂದ್ರ ಕೌತಾಳ
ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ರಾಜಕೀಯ ಬೆಳವಣಿಗೆಯನ್ನು ಸ್ವಲ್ಪ ಜನರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ಇಡೀ ರಾಜಕಾರಣದಲ್ಲಿ ಕಪ್ಪು ಚುಕ್ಕಿ ಇರದೆ ಕೆಲಸ ಮಾಡಿದವರು ಎಂದು ಬಿಜೆಪಿ ಎಸ್‍ಸಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು ಧಾರವಾಡ ಕ್ಷೇತ್ರದ ಪ್ರಜೆ; ಅಲ್ಲೇ ಹುಟ್ಟಿ ಬೆಳೆದಿದ್ದೇನೆ. ಹಾಗೇ ಮಾನ್ಯ ಪ್ರಲ್ಹಾದ್ ಜೋಶಿಯವರನ್ನು ಹತ್ತಿರದಿಂದ ನೋಡಿದ್ದೇನೆ ಎಂದರು.
ಪ್ರಲ್ಹಾದ್ ಜೋಶಿಯವರು ಪಕ್ಷದ ರಾಜ್ಯ ಅಧ್ಯಕ್ಷರಾಗಿ, ಸಚಿವರಾಗಿ, ಇದೀಗ ನರೇಂದ್ರ ಮೋದಿಜೀ ಅವರ ಜೊತೆ ಒಳ್ಳೆಯ ಒಡನಾಟ ಇರುವಂಥ ಸಂಸದರಾಗಿ, ಸಚಿವರಾಗಿ ಬೆಳೆಯುತ್ತಿರುವ ಪ್ರಧಾನ ವ್ಯಕ್ತಿ ಎಂದು ವಿಶ್ಲೇಷಿಸಿದರು. ಅವರ ಬಗ್ಗೆ ಪತ್ರಿಕೆಯಲ್ಲಿ ಅವರ ಸಂಬಂಧಿಕರು ಬೇರೆ ಯಾರಿಗೋ ಟಿಕೆಟ್ ಕೊಡಿಸುತ್ತೇವೆ; ಹಣ ಕೊಡಿ ಎಂದು ಕೇಳಿದ್ದ ವಿಷಯ ಪ್ರಸ್ತಾಪವಾಗಿದೆ ಎಂದರು.
ಪ್ರಲ್ಹಾದ್ ಜೋಶಿಯವರು 2012ರಲ್ಲೇ ಅವರಿಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಪತ್ರಿಕಾಹೇಳಿಕೆ ಕೊಟ್ಟಿದ್ದರು ಎಂದು ಪ್ರತಿಯನ್ನು ಪ್ರದರ್ಶಿಸಿದರು. ಅದೇರೀತಿ ಒಂದು ಅಫಿದವಿಟ್ ಕೂಡ ಕೊಟ್ಟಿದ್ದರು; ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ; ಅವರು ಏನೇ ತಪ್ಪು ಮಾಡಿದರೂ ಕೂಡ ಖಡಾಖಂಡಿತವಾಗಿ ಕಾನೂನುಪ್ರಕಾರ ಒಳಗಡೆ ಹಾಕಿ ಎಂದು 2012ರಲ್ಲೇ ಹೇಳಿದ್ದರು. ಅಂಥ ತಪ್ಪಾಗಿದ್ದರೆ ತನಿಖೆ ಮಾಡಿ ಒಳಗಡೆ ಹಾಕಲಿ ಎಂದು ಒತ್ತಾಯಿಸಿದ್ದಾರೆ.