ಕೆಲವು ಆಹಾರ ಪದಾರ್ಥಗಳಿಗೆ ಕರಿ ಬೆವಿನ ಒಗ್ಗರಣೆ ಬಿತ್ತು ಎಂದರೆ ಸಾಕು. ಅದರ ರುಚಿ ಹಾಗೂ ಪರಿಮಳದ ಗಮ್ಮತ್ತೇ ಬೇರೆ ಇರುತ್ತದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ಬಹುತೇಕ ಮಹಿಳೆಯರು ಆಹಾರ ಪದಾರ್ಥಗಳಿಗೆ ಕರಿ ಬೇವಿನ ಒಗ್ಗರಣೆಯನ್ನು ಹಾಕುತ್ತಾರೆ. ಅದು ನೈಸರ್ಗಿಕವಾಗಿ ಅನೇಕ ಆರೋಗ್ಯ ಲಾಭಗಳನ್ನು ನೀಡುವುದರ ಜೊತೆಗೆ ಅಡುಗೆಯ ಮೆರಗನ್ನು ಹೆಚ್ಚಿಸುವುದು.
ಕರಿ ಬೇವಿನ ಎಲೆ ಔಷಧೀಯ ಗುಣವನ್ನು ಹೊಂದಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾ1ರವನ್ನು ನೀಡುವುದು. ಇದರ ಬಳಕೆಯು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕರಿಬೇವನ್ನು ಬೆಳಸಿಕೊಂಡು ಸಾಕಷ್ಟು ಔಷಧ, ಸೌಂದರ್ಯ ವರ್ಧಕ ಉತ್ಪನ್ನ ಹಾಗೂ ಆಹಾರ ಪದಾರ್ಥಗಳನ್ನು ತಯಾರಿಸಲಾಗುವುದು. ಕರಿಬೇವು ಕೂದಲ ಆರೈಕೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುವುದು.
ಕರಿಬೇವಿನ ಎಲೆಗಳಲ್ಲಿ ಬೀಟಾ-ಕ್ಯಾರೋಟಿನ್, ಪ್ರೊಟೀನ್ ಹೇರಳವಾಗಿದ್ದು ಇದು ಕೂದಲು ಉದುರುವುದನ್ನು ತಡೆಯುವುದಷ್ಟೇ ಅಲ್ಲ ಕೂದಲಿನ ಕಿರುಚೀಲಗಳನ್ನು ಬಲಪಡಿಸಿ ಕೂದಲು ಬೆಳೆಯಲು, ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡಲು ಕೂಡ ಪ್ರಯೋಜನಕಾರಿ ಆಗಿದೆ.
ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಕೊಬ್ಬರಿ ಎಣ್ಣೆ ಕೂದಲಿನ ಸರ್ವ ಸಮಸ್ಯೆಗೂ ರಾಮಬಾಣವಿದ್ದಂತೆ. ಒಂದು ಹಿಡಿ ಕರಿಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ, ಇದರಲ್ಲಿ ಒಂದೆರಡು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಒಲೆಯ ಮೇಲಿಟ್ಟು ಐದು ನಿಮಿಷ ಕಾಯಿಸಿ. ಕಾಯಿಸಿಟ್ಟ ಎಣ್ಣೆ ತಣ್ಣಗಾದ ಬಳಿಕ ನಿಧಾನವಾಗಿ ಕೂದಲಿನ ಬುಡದಿಂದ ತುದಿಯವರೆಗೂ ಎಣ್ಣೆಯನ್ನು ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಅರ್ಧಗಂಟೆ ಹಾಗೆ ಬಿಟ್ಟು ಹೇರ್ ವಾಶ್ ಮಾಡಿದರೆ, ಸುಂದರ ಕಡು ಕಪ್ಪಾದ ಕೂದಲನ್ನು ನಿಮ್ಮದಾಗಿಸಬಹುದು.