ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನವಾದ ಇಂದು ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿತು. ಹೌದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಇದು 36 ವರ್ಷಗಳ ಬಳಿಕ ಭಾರತದಲ್ಲಿ ನ್ಯೂಜಿಲೆಂಡ್ ಗೆ ಸಿಕ್ಕ ಮೊದಲ ಜಯವಾಗಿದೆ. 1988ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಭಾರತದಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯ ಗೆದ್ದಿತ್ತು.
107 ರನ್‌ಗಳ ಸಾಧಾರಣ ಗುರಿ ಪಡದ ನ್ಯೂಜಿಲೆಂಡ್ ತಂಡವು ಮೊದಲ ಓವರ್‌ನಲ್ಲೇ ನಾಯಕ ಟಾಮ್ ಲೇಥಮ್ ವಿಕೆಟ್ ಕಳೆದುಕೊಂಡಿತು. ಜಸ್ಪ್ರೀತ್ ಬುಮ್ರಾ, ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಲೇಥಮ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ(17)ಯನ್ನು ಬುಮ್ರಾ ಪೆವಿಲಿಯನ್‌ಗೆ ಅಟ್ಟಿದರು. ಆಗ ನ್ಯೂಜಿಲೆಂಡ್ ಸ್ಕೋರ್ 2 ವಿಕೆಟ್ ನಷ್ಟಕ್ಕೆ 35 ರನ್.
ಇದಾದ ಬಳಿಕ ಜತೆಯಾದ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಮೂರನೇ ವಿಕೆಟ್‌ಗೆ ಮುರಿಯದ 72 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಯಾವುದೇ ಅಪಾಯವಿಲ್ಲದೇ ಗೆಲುವಿನ ದಡ ಸೇರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ರಚಿನ್ ರವೀಂದ್ರ ಅಮೂಲ್ಯ 39 ರನ್ ಬಾರಿಸಿದರೇ, ಮತ್ತೊಂದು ತುದಿಯಲ್ಲಿ ವಿಲ್ ಯಂಗ್ 45 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ನೀಡಿದ್ದ 107 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಸುಲಭ ಜಯಗಳಿಸಿತು. 1988 ರ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಕಿವೀಸ್ ಪಡೆ ಮೊದಲ ಜಯವನ್ನು ದಾಖಲಿಸಿತು.