ಮೊಣಕಾಲಿನ ನೋವಿನಿಂದ ಬಳಲುತ್ತಿರುವ ರಿಷಭ್ ಪಂತ್ ಅವರು, ನ್ಯೂಝಿಲೆಂಡ್ ವಿರುದ್ಧದ 2 ಟೆಸ್ಟ್ ನಲ್ಲಿ ಅಲಭ್ಯರಿರಲಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ವೇಳೆ ರಿಷಭ್ ಪಂತ್ ಅವರ ಮೊಣಕಾಲಿಗೆ ಚೆಂಡು ಬಡಿದಿತ್ತು. ರವೀಂದ್ರ ಜಡೇಜಾ ಎಸೆದ ಎಸೆತವು ಕೀಪಿಂಗ್ ಮಾಡುತ್ತಿದ್ದ ಪಂತ್ ಅವರ ಕಾಲಿಗೆ ನೇರವಾಗಿ ಬಡಿಯಿತು. ಈ ವೇಳೆ ತ್ರೀವ್ರ ನೋವಿನಿಂದ ನರಳಿದ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು.
ಇದಾಗ್ಯೂ ಭಾರತ ತಂಡದ ದ್ವಿತೀಯ ಇನಿಂಗ್ಸ್ ವೇಳೆ ರಿಷಭ್ ಪಂತ್ ಬ್ಯಾಟಿಂಗ್ಗೆ ಆಗಮಿಸಿದ್ದರು. ಅಲ್ಲದೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ 105 ಎಸೆತಗಳಲ್ಲಿ 99 ರನ್ ಬಾರಿಸಿದ್ದರು. ಇದೇ ವೇಳೆ ಅವರು ರನ್ ಓಡಲು ಕಷ್ಟಪಡುತ್ತಿರುವುದು ಕಂಡು ಬಂದಿತ್ತು.
ಇದೇ ನೋವಿನ ಕಾರಣ ಅವರು ದ್ವಿತೀಯ ಇನಿಂಗ್ಸ್ನಲ್ಲಿ ವಿಕೆಟ್ ಕೀಪಿಂಗ್ ಮಾಡಿಲಿಲ್ಲ. ಬದಲಾಗಿ ಧ್ರುವ್ ಜುರೇಲ್ ವಿಕೆಟ್ ಕೀಪರ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮೊಣಕಾಲಿನ ನೋವಿನಿಂದ ಬಳಲುತ್ತಿರುವ ರಿಷಭ್ ಪಂತ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದ್ದು, ಗುರುವಾರದೊಳಗೆ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರು ಕಣಕ್ಕಿಳಿಯಬಹುದು.