ಹುಬ್ಬಳ್ಳಿ: ಚನ್ನಪಟ್ಟಣ ಉಪಚುನಾವಣೆ ಸ್ಪರ್ಧೆ ವಿಚಾರವಾಗಿ ಪಟ್ಟು ಸಡಿಲಿಸಲು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಸಿದ್ಧರಿಲ್ಲ. ಅತ್ತ ಹೆಚ್ಡಿ ಕುಮಾರಸ್ವಾಮಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಬಿಜೆಪಿ ನಾಯಕರು ಕಾಂಗ್ರೆಸ್ ಜತೆಗೂಡಿ ತಂತ್ರ ಹೂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಎಲ್ಲ ವಿಚಾರಗಳ ಬೆನ್ನಲ್ಲೇ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಪಿ ಯೋಗೇಶ್ವರ್ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಂತ ಅವರು, ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆಯನ್ನು ಅಧಿಕೃತವಾಗಿ ನೀಡಿದ್ದಾರೆ.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ವಿಧಾನ ಪರಿಷತ್ ಸದಸ್ಯ ಸ್ಥಆನಕ್ಕೆ ರಾಜೀನಾಮೆ ನೀಡಿದ್ದೇನೆ. ಈಗ ನಾನು ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂಬುದಾಗಿ ತಿಳಿಸಿದರು.