*ಮುನೇನಕೊಪ್ಪ ಅವರ ಒತ್ತಡಕ್ಕೆ ಮಣಿದು ಚೆಕ್ ವಿತರಿಸಿದ ತಾಲೂಕಾಡಳಿತ*
*ಹೋರಾಟ ನಡೆಸಿ ಸ್ಥಳದಲ್ಲೇ ನ್ಯಾಯ ಒದಗಿಸಿದ ಬಿಜೆಪಿ*
*ಸ್ವಂತ ಹಣವನ್ನ ಮನೆ ಬಿದ್ದವರಿಗೆ ಮತ್ತು ರೈತರ ಅಕೌಂಟ್‌ಗೆ ಹಾಕಿದ್ರೇ, ಮನೆ ಮನೆಯಲ್ಲಿ ಕೋನರೆಡ್ಡಿಯವರ ಭಾವಚಿತ್ರ ಹಾಕಿಸುವೆ*
ನವಲಗುಂದ: ನಿರಂತರ ಮಳೆಯಿಂದ ತತ್ತರಿಸಿ ಹೋಗಿರುವ ನವಲಗುಂದ ವಿಧಾನಸಭಾ ಕ್ಷೇತ್ರದ ಜನರಿಗಾಗಿ ಭಾರತೀಯ ಜನತಾ ಪಕ್ಷ ಇಂದು ಬೃಹತ್ ಹೋರಾಟ ನಡೆಸಿ, ತಾಲೂಕು ಆಡಳಿತ ಮತ್ತು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನವಲಗುಂದ ಪಟ್ಟಣದ ರೈತ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ತಹಶೀಲ್ದಾರ ಕಚೇರಿಯವರೆಗೆ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ನಡೆಸಲಾಯಿತು.
ತಹಶೀಲ್ದಾರ ಕಚೇರಿ ಎದುರಿಗೆ ಜಮಾಯಿಸಿದ ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರಿಗಳನ್ನ ಬೆವರಿಳಿಸಿದ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು, ಮನೆ ಬಿದ್ದು ಮರಣ ಹೊಂದಿದರೇ ಎಷ್ಟು ದಿನದಲ್ಲಿ ಪರಿಹಾರ ನೀಡಬೇಕು. ಮನೆ ಬಿದ್ದ ಸಮಯದಲ್ಲಿ ನೀಡಬೇಕಾದ ಪರಿಹಾರ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವರ ಮಾತಿನಿಂದ ಕಂಗಾಲಾದ ತಹಶೀಲ್ದಾರ ಸಾವುಕಾರ್, ತಕ್ಷಣವೇ ಚೆಕ್ ನೀಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾನಿರತರು, ಚೆಕ್ ವಿತರಣೆ ಮಾಡುವವರೆಗೆ ಇಲ್ಲಿಂದ ಕದಲುವುದಿಲ್ಲವೆಂದು ಎಚ್ಚರಿಸಿದ ನಂತರ, ಹನಸಿಯ ಮೃತ ಮಂಗಳಾ ಪಾಟೀಲ ಅವರ ಕುಟುಂಬದವರಿಗೆ ಚೆಕ್ ವಿತರಣೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮಾತನಾಡಿ, ತಮ್ಮ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಮನೆ ಬಿದ್ದರೇ ತಕ್ಷಣವೇ ಹಣವನ್ನ ನೀಡಲಾಗುತ್ತಿತ್ತು. ಮರಣ ಹೊಂದಿದರೇ 24 ಗಂಟೆಯಲ್ಲಿ ಪರಿಹಾರ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಪರಿಹಾರ ಕೊಡದೇ ದಿನಗಳನ್ನ ಮುಂದೂಡಲಾಗುತ್ತಿದೆ. ರೈತಾಪಿ ಜನರಿಗೆ ಆಗಿರುವ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಮನೆ ಬಿದ್ದು ಸಾವಿಗೀಡಾದ ಮಂಗಳಾ ಪಾಟೀಲ ಕುಟುಂಬಕ್ಕೆ 25ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಾಲಿ ಶಾಸಕರು ರಸ್ತೆಯನ್ನ ಸ್ವಂತ ದುಡ್ಡಿಂದ ಮಾಡ್ತೇನಿ ಅಂತಿದ್ರು. ಅದನ್ನ ಬಿಟ್ಟು ಬೆಳೆಹಾನಿ ರೈತನ ಕುಟುಂಬ ಹಾಗೂ ಮನೆ ಬಿದ್ದವರ ಅಕೌಂಟ್ ಸ್ವಂತ ಹಣ ಹಾಕಿದರೇ, ನಾನೇ ನಮ್ಮ ಪಕ್ಷದ ಅಧ್ಯಕ್ಷರ ಕಡೆಯಿಂದ ಕೋನರೆಡ್ಡಿಯವರ ಭಾವಚಿತ್ರ ಹಾಕಿಸುತ್ತೇನೆ ಎಂದು ಸವಾಲು ಹಾಕಿದರು.
ಮತ್ತೆ ನಾವು ತಹಶೀಲ್ದಾರ ಕಚೇರಿಗೆ ಬರದಂತೆ ನೋಡಿಕೊಳ್ಳುವುದು ತಾಲೂಕಾಡಳಿತದ ಮೇಲಿದೆ. ಕ್ಷೇತ್ರದ ಜನರಿಗೆ ಅನ್ಯಾಯವಾದರೇ, ಬಿಜೆಪಿ ಯಾವತ್ತೂ ಸುಮ್ಮನೆ ಕೂಡುವುದಿಲ್ಲವೆಂದು ಎಚ್ಚರಿಸಿದರು.