ಬೆಂಗಳೂರು: ಚನ್ನಪಟ್ಟಣ ಅಖಾಡದಲ್ಲಿ ಸೈನಿಕ ಸಿಪಿ ಯೋಗೇಶ್ವರ್‌ಗೆ ಸವಾಲು ಎಸೆದು ದಳಪತಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಭದ್ರಕೋಟೆ. ಅದರಲ್ಲೂ ಎಚ್‌ಡಿ ಕುಮಾರಸ್ವಾಮಿಯನ್ನು ಎರಡು ಬಾರಿ ಗೆಲ್ಲಿಸಿದ ಕ್ಷೇತ್ರ. ತಂದೆಯನ್ನು ಗೆಲ್ಲಿಸಿದ ಕ್ಷೇತ್ರ, ಪುತ್ರನ ಕೈಹಿಡಿಯಲಿದೆ ಎಂಬ ವಿಶ್ವಾಸ ದಳಪತಿಗಳಿಗೆ ಇದೆ.
ಈ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನೇ ಅಖಾಡಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಅಲ್ಲದೆ, ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕರ್ತರ ಪಡೆ ಇದೆ. ಪಕ್ಷದ ಭದ್ರಕೋಟೆಯಲ್ಲಿ ಗೆಲುವು ದಕ್ಕಲಿದೆ ಎಂಬುದು ದಳಪತಿಗಳ ಲೆಕ್ಕಾಚಾರವಾಗಿದೆ.
ಇದರ ಬೆನ್ನಲ್ಲೇ ಚನ್ನಪಟ್ಟಣ ಉಪಚುನಾವಣೆಯ ‘ಮೈತ್ರಿ’ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಬಿಬಿಎ ಪದವೀಧರನಾಗಿರುವ ನಿಖಿಲ್ ಬರೋಬ್ಬರಿ 113 ಕೋಟಿ ಆಸ್ತಿ ಒಡೆಯ. ಒಟ್ಟು 78.15 ಕೋಟಿ ಮೌಲ್ಯದ ಚರಾಸ್ತಿ, 29.34ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಪತ್ನಿ ರೇವತಿ ನಿಖಿಲ್ ಹೆಸರಲ್ಲಿ 5.49ಕೋಟಿ ಮೌಲ್ಯದ ಚರಾಸ್ತಿ, 43 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಆವ್ಯಾನ್ ದೇವ್ ಹೆಸರಲ್ಲಿ 11 ಲಕ್ಷ ಹಣ ಇದೆ. ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ 1.488 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಹಾಗೂ ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್ ಇದೆ. 1 ಇನ್ನೋವಾ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ ಎರಡು ಕ್ಯಾರಾವ್ಯಾನ್, 1 ಇನ್ನೋವಾ ಕ್ರಿಸ್ಟ ಕಾರು ಇದೆ. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರಲ್ಲಿ ಒಟ್ಟು 70.44 ಕೋಟಿ ಸಾಲ ಇದೆ. ರೇವತಿ ಹೆಸರಲ್ಲಿ 4.96 ಕೋಟಿ ಸಾಲ ಇದೆ.