ಜಾನಪದ ಹಾಡಿಗೆ ಭಾವುಕರಾದ ಸಚಿವ ಸಂತೋಷ ಲಾಡ್
ಧಾರವಾಡ: ಧಾರವಾಡದಲ್ಲಿ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹೆತ್ತ ತಾಯಿ ತಂದೆ ಮರೀಬ್ಯಾಡ ನೀನಾ.. ಸಾಯುವ ತನಕ ಮಾಡು ಜೋಪಾನ !! ಸಾಯುವ ತನಕ ಮಾಡು ಜೋಪಾನ.. ಎಂಬ ಕರುಣಾಜನಕವಾದ ಈ ಜಾನಪದ ಹಾಡಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಹಿರಿಯ ಮುಖಂಡರಾದ ಚಂದ್ರಕಾಂತ ಬೆಲ್ಲದ್, ಹಿರಿಯ ಸಾಹಿತಿ ಡಾ. ಮಲ್ಲಿಕಾ ಘಂಟಿ ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಂಭಯ್ಯ ಬಳಗ, ಜಾಗೃತ ಗೀತೆಗಳನ್ನು ಹಾಡಿತು. ಇದರಲ್ಲಿ : ಓಹೋ.. ಹೆತ್ತ ತಾಯಿ ತಂದೆಯನ್ನಾ… ಮರೀಬ್ಯಾಡ ನೀನಾ.. ಸಾಯುವ ತನಕ ಮಾಡು ಜೋಪಾನ !! ಸಾಯುವ ತನಕ ಮಾಡು ಜೋಪಾನ.. ಈ ಹಾಡಿಗೆ ಕಣ್ಣೀರಾದರು. ಕಡುಕಷ್ಟದ ತಾಯಿತಂದೆಯರು ಎದುರಿಸುವ ಕಷ್ಟಗಳನ್ನ ನೆನೆದು ಸಚಿವರು ಬಾವುಕರಾದರು.
ಸಚಿವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದ ಹಿರಿಯ ಸಾಹಿತಿ ಡಾ. ಮಲ್ಲಿಕಾ ಘಂಟಿ, ಹಿರಿಯರಾದ ಚಂದ್ರಕಾಂತ ಬೆಲ್ಲದ್ ಮತ್ತಿತರರು ಏಕಚಿತ್ತದಿಂದ ಹಾಡನ್ನು ಆಲಿಸಿದರು. ಅವರೂ ಸಹ ಕಣ್ಣೀರು ಒರೆಸಿಕೊಳ್ಳುತ್ತ ಈ ಜನಪದ ಹಾಡಿಗೆ ತಲೆದೂಗಿದರು. ಕೊನೆಗೆ ಬಾವುಕತೆಯಿಂದಲೇ ಚಪ್ಪಾಳೆ ತಟ್ಟಿ ಕಲಾವಿದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊನೆಗೆ ಸಚಿವ ಸಂತೋಷ್ ಲಾಡ್ ಅವರು, ಇಂಪಾಗಿ, ಮನಮುಟ್ಟುವಂತೆ ಹಾಡು ಆಡಿದ ಕಲಾವಿದ ಶಂಭಯ್ಯ ನನ್ನು ವೇದಿಕೆಯಲ್ಲೆ ಕರೆದು ಅಲಂಗಿಸಿಕೊಂಡರು. ಚೆನ್ನಾಗಿ ಹಾಡಿದ್ದೀರಿಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗುಲಾಬಿ ಹೂವುಗಳನ್ನು ನೀಡಿದಲ್ಲದೆ, ವೈಯಕ್ತಿಕವಾಗಿ ಧನ ಸಹಾಯದ ಮೊತ್ತದ ಚೆಕ್ ನ್ನು ಕೂಡ ನೀಡಿದರು.
ಸಚಿವರ ಈ ನಡೆಯು ಇಡೀ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಕಾರಣವಾಯಿತು. ಹಿರಿಯರಾದ ಚಂದ್ರಕಾಂತ್ ಬೆಲ್ಲದ್ ಮತ್ತಿತರರು ಕೂಡ ಹರ್ಷ ವ್ಯಕ್ತಪಡಿಸಿದರು.
ಉದಯ ವಾರ್ತೆ ಧಾರವಾಡ