ನವೆಂಬರ್ ತಿಂಗಳೆಂದರೆ ಕನ್ನಡಿಗರಿಗೆ ವಿಶೇಷವಾದ ತಿಂಗಳು. ಈ ವರ್ಷ ನಾವೆಲ್ಲಾ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಿದ್ದೇವೆ. ಪ್ರತಿ ಶಾಲೆ-ಕಾಲೇಜುಗಳಲ್ಲಿ ಭಾಷಣ, ಪ್ರಬಂಧ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ಸರ್ಕಾರದ ವತಿಯಿಂದ ಕೋಟಿ ಕಂಠ ಗಾಯನ ಎನ್ನುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗುತ್ತೆ. ಸದ್ಯ ನಾವು ಈ ವರ್ಷ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.
ಕನ್ನಡ ರಾಜ್ಯೋತ್ಸವದ ಇತಿಹಾಸ
ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರು ಮೈಸೂರು ರಾಜ್ಯ. 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಆರಂಭವಾಯಿತು. 1950 ರಲ್ಲಿ ಭಾರತವು ಗಣರಾಜ್ಯವಾಯಿತು. ಬಳಿಕ ಅಲ್ಲಲ್ಲಿ ಚದುರಿದ್ದ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ವಿವಿಧ ರಾಜ್ಯಗಳನ್ನು ರಚನೆ ಮಾಡಲಾಯಿತು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. 1956 ರ ನವೆಂಬರ್ 1 ರಂದು, ಮದ್ರಾಸ್, ಬಾಂಬೆ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. 1973ರ ನವೆಂಬರ್ 1ರಂದು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳನ್ನು ಒಳಗೊಂಡಿತ್ತು. ಇದೀಗ ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ. ಅಂದಿನಿಂದ ನವೆಂಬರ್ 1 ನ್ನು ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
ಕರ್ನಾಟಕ ಎಂಬ ಹೆಸರು ಬಂದದ್ದು ಹೇಗೆ?
ನಮ್ಮ ಕರ್ನಾಟಕವನ್ನು ಕನ್ನಡ ನಾಡು, ಕರುನಾಡು, ಶ್ರಿಗಂಧದ ನಾಡು ಎಂದೂ ಕರೆಯಲಾಗುತ್ತದೆ. ಕರ್ನಾಟಕ ಪದದ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿವೆ. “ಕರು” ಮತ್ತು “ನಾಡು” ಸೇರಿ “ಎತ್ತರದ ಭೂಮಿ” ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ ಎನ್ನಲಾಗಿದೆ. ಕರು ಎಂದರೆ ಕಪ್ಪು, ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಂಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ ಪ್ರದೇಶವಾಗಿರುವುದರಿಂದ ಬ್ರಿಟೀಷರ ಕಾಲದಲ್ಲಿ ಕಾರ್ನಾಟಿಕ್ ಅಥವಾ ಕರ್ನಾಟಕ ಹೆಸರು ಬಳಕೆಗೆ ಬಂತು.
ಕನ್ನಡದ ಹೋರಾಟಗಾರರಾದ ಎಂ ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣ ಬಳಸಿ ಕನ್ನಡದ ಬಾವುಟವನ್ನು ಸಿದ್ದಪಡಿಸಿದ್ದಾರೆ.ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆ ಸೂಚಿಸುತ್ತದೆ. ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಹಾಗೆಯೇ ಇದು ಕನ್ನಡಾಂಬೆ ಭುವನೇಶ್ವರಿಯ ಅರಿಶಿನ-ಕುಂಕುಮದ ಸಂಕೇತವೂ ಆಗಿದೆ.