ಬೆಂಗಳೂರು :- ಉಪಚುನಾವಣೆ ಹೊತ್ತಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಎಂಬ ಡಿಕೆಶಿ ಹೇಳಿದ ಮಾತಿನಿಂದ ಮಹಿಳೆಯರ ವೋಟು ತಪ್ಪುವ ಭೀತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಪಂಚ ಯೋಜನೆಗಳ ಪೈಕಿ ಗೊಂದಲವಿಲ್ಲದೆ, ಸರಾಗವಾಗಿ ನಡೆಯುತ್ತಿರುವುದೇ ಶಕ್ತಿ ಯೋಜನೆ ಮಾತ್ರ. ಈ ಯೋಜನೆ ಮರುಪರಿಶೀಲನೆ ನಡೆಸುತ್ತೇವೆ ಎಂಬ ಮಾತುಗಳು, ಕಾಂಗ್ರೆಸ್ಗೆ ಮುಜುಗರ ತಂದಿದೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಮಹಿಳೆಯರಿಗೆ ಶಕ್ತಿ ಯೋಜನೆ ಹೆಚ್ಚು ಅನುಕೂಲವಾಗಿದೆ. ತೀರ್ಥ ಕ್ಷೇತ್ರಗಳಿಗೆ ಹೆಚ್ಚೆಚ್ಚು ಮಹಿಳೆಯರು ಹರಿದು ಬರಲು ಕಾರಣವಾಗಿದೆ.
ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ ಶಕ್ತಿ ಯೋಜನೆ ಮುಂದುವರೆಯುವ ಬಗ್ಗೆ ಮಹಿಳೆಯರಲ್ಲಿ ಅನುಮಾನ ಹುಟ್ಟಿದೆ. ಇದು ಕಾಂಗ್ರೆಸ್ಗೆ ಬರುವ ಮತಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ. ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಗೆ ಚುನಾವಣೆ ಯಲ್ಲಿ ಗ್ಯಾರಂಟಿ ಬಿಟ್ಟು ಬೇರೆ ಅಸ್ತ್ರವೇ ಇಲ್ಲದಂತಾಗಿತ್ತು. ಇದೀಗ ಕಾಂಗ್ರೆಸ್ ಅದೇ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದೆ. ನೆರೆ ರಾಜ್ಯದ ಚುನಾವಣೆ ಮೇಲೂ ಗ್ಯಾರಂಟಿ ಮರುಪರಿಶೀಲನೆ ಹೇಳಿಕೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.