ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಲಕ್ಷಾಂತರ ಬಡವರು ಪ್ರಯೋಜನ ಪಡೆಯುತ್ತಿದ್ದಾರೆ. ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದಾಗಿ ಮಹಿಳೆಯೊಬ್ಬರು ಊರಿಗೆ ಹೋಳಿಗೆ ಊಟ ಬಡಿಸುವ ಮೂಲಕ ರಾಜ್ಯದ ಗಮನಸೆಳೆದಿದ್ದರು. ಇನ್ನೂ ಈ ಮಹಿಳೆಯನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಅಭಿನಂದನೆ ಸಲ್ಲಿಸಿದ್ದರು.
ಈ ಹಿಂದೆ ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್ ಖರೀದಿ ಮಾಡಿರುವುದು. ಅಜ್ಜಿಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಸೊಸೆಗೆ ಅತ್ತೆಯೊಬ್ಬರು ಫ್ಯಾನ್ಸಿ ಅಂಗಡಿ ಹಾಕಿಕೊಟ್ಟಿರೋದು, ಬಡ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ತನ್ನ ಗಂಡನ ಕಣ್ಣಿನ ಆಪರೇಷನ್ ಮಾಡಿಸಿದ್ದು ಸುದ್ದಿಯಾಗಿತ್ತು. ಬೆಳಗಾವಿಯ ಮಹಿಳೆಯೊಬ್ಬರು ಮಗನಿಗೆ ಬೈಕ್ ಖರೀದಿಸಲು ಮುಂಗಡ ಹಣ ಪಾವತಿಸಿದ್ದು ಗಮನಸೆಳೆದಿತ್ತು. ಇದರ ನಡುವೆಯೇ ಮತ್ತೊಂದು ಸಾರ್ವಜನಿಕ ಕಾರ್ಯ ಬೆಳಕಿಗೆ ಬಂದಿದೆ.
ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನ ಹಾಕಲಾಗುತ್ತಿದೆ. ಈ ಹಣದಿಂದ ಬೆಳಗಾವಿ ಜಿಲ್ಲೆಯ ಕುಕಡೊಳ್ಳಿ ಗ್ರಾಮದ ಮಹಿಳೆ ತಾಯವ್ವ ಲಕಮೋಜಿ ಖಾರ ಪುಡಿ ಮಾಡುವ ಯಂತ್ರ ಖರಿದೀಸಿದ್ದಾರೆ. ತಾಯವ್ವ ಲಕಮೋಜಿ ಖದೀಸಿದ ಯಂತ್ರವನ್ನು, ಆಕೆಯ ಕಿರು ಉದ್ದಿಮೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡಿದ್ದಾರೆ.
ಗೃಹ ಲಕ್ಷ್ಮಿ ಹಣದಲ್ಲಿ ಅನೇಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಸಚಿವೆ ಸಂತಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯಿಂದ ಅನೇಕ ಮಹಿಳೆಯರು ತಮ್ಮ ಸಣ್ಣ ಪುಟ್ಟ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಮನೆಯ ಖರ್ಚು ವೆಚ್ಚಹಳನ್ನು ಭರಿಸಲು ಬಳಸಿಕೊಳ್ಳುತ್ತಿದ್ದಾರೆ.