ಟೀಮ್ ಇಂಡಿಯಾವು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಬೆಂಗಳೂರು, ಪುಣೆಯಲ್ಲಿ ಸೋಲು ಕಂಡಿದ್ದ ಟೀಮ್ ಇಂಡಿಯಾ, ಮುಂಬೈನಲ್ಲಾದರೂ ಗೆದ್ದು ಮಾನ ಉಳಿಸಿಕೊಳ್ಳುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಜಸ್ಟ್ 147 ರನ್‌ಗಳ ಗುರಿ ಬೆನ್ನಟ್ಟಲು ವಿಫಲವಾಗಿ ನ್ಯೂಜಿಲೆಂಡ್ ಮುಂದೆ ಶರಣಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಮೊದಲ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು ಎಂಬ ಚರ್ಚೆ ಶುರುವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಸಚಿನ್ ತೆಂಡೂಲ್ಕರ್, ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಸರಣಿ ಸೋಲಿನ ಬಗ್ಗೆ ಅವರು 3 ದೊಡ್ಡ ಪ್ರಶ್ನೆಗಳನ್ನು ಕೇಳಿದ್ದಾರೆ
ತವರು ನೆಲದಲ್ಲಿ ಭಾರತ ತಂಡವು 3-0 ಸೋತಿರುವುದು ಅರಗಿಸಿಕೊಳ್ಳಲಾಗದ ವಿಷಯ. ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ. ಈ ಸೋಲಿಗೆ ಕಾರಣ ತಯಾರಿಯ ಕೊರತೆಯೇ? ಕಳಪೆ ಶಾಟ್ ಆಯ್ಕೆಯೇ? ಅಥವಾ ಪಂದ್ಯದ ಅಭ್ಯಾಸದ ಕೊರತೆಯೇ?’ ಎಂದು ಸಚಿನ್ ತೆಂಡೂಲ್ಕರ್ ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನಿಸಿದ್ದಾರೆ.
ಟೀಮ್ ಇಂಡಿಯಾ ವೈಫಲ್ಯವನ್ನು ಪ್ರಶ್ನಿಸಿರುವ ಸಚಿನ್ ತೆಂಡೂಲ್ಕರ್ ಇಬ್ಬರು ಯುವ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶುಭ್ಮನ್ ಗಿಲ್ 90 ರನ್ ಗಳಿಸಿದ್ದರು. ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು.
ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ ಕ್ರೀಸ್ ಕಚ್ಚಿ ಆಡುವುದನ್ನು ತೋರಿಸಿದರು ಮತ್ತು ರಿಷಭ್ ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅವರ ಫೂಟ್ವರ್ಕ್ ಸವಾಲಿನ ಪಿಚ್ನಲ್ಲಿನ ಆಟವನ್ನು ಸಂಪೂರ್ಣವಾಗಿ ವಿಭಿನ್ನಗೊಳಿಸಿತು. ಇಬ್ಬರೂ ಕೂಡ ಅದ್ಭುತವಾಗಿ ಆಡಿದರು ಎಂದು ಸಚಿನ್ ತೆಂಡೂಲ್ಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರುವ ನ್ಯೂಝಿಲೆಂಡ್ ತಂಡಕ್ಕೆ ಸಚಿನ್ ತೆಂಡೂಲ್ಕರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸರಣಿಯುದ್ದಕ್ಕೂ ಸತತವಾಗಿ ಉತ್ತಮ ಪ್ರದರ್ಶನ ನೀಡಿದ ನ್ಯೂಝಿಲೆಂಡ್‌ಗೆ ಸಂಪೂರ್ಣ ಕ್ರೆಡಿಟ್ ಸಲ್ಲುತ್ತದೆ. ಭಾರತದಲ್ಲಿ 3-0 ಅಂತರದಲ್ಲಿ ಗೆದ್ದಿರುವುದು ಅತ್ಯುತ್ತಮ ಫಲಿತಾಂಶ ಎಂದು ಸಚಿನ್ ತೆಂಡೂಲ್ಕರ್ ಕಿವೀಸ್ ಪಡೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.