ಮಂಡ್ಯ: ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದ ಅಖಾಡಕ್ಕೆ ಇವತ್ತು ದೇವೇಗೌಡ್ರು ಇಳಿದಿದ್ದಾರೆ. ಮಂಡ್ಯ, ರಾಮನಗರದಲ್ಲಿ ಸೋಲನ್ನು ಕಂಡಿರುವ ನಿಖಿಲ್ ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಈಗಾಗಿ ಇಂದು ತಾತ ದೇವೇಗೌಡರು ತಮ್ಮ ಮೊಮ್ಮಗನ ಪರವಾಗಿ ಕ್ಷೇತ್ರದ ಐದು ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ರು.
ಪ್ರಚಾರದ ವೇಳೆ ಮಾತನಾಡಿದ ಮಾಜಿ ಪ್ರಧಾನಿ..ನಾನು ನನ್ನ 60 ವರ್ಷದ ರಾಜಕೀಯದಲ್ಲಿ ಇಂತಹ ದ್ವೇಷದ ರಾಜಕಾರಣ ಎಂದು ನೋಡಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡ್ತಿದೆ ಅಂತಾ ಕಾಂಗ್ರೆಸ್ ಸರ್ಕಾರದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆ ಬ್ರದರ್ಸ್‌ಗೆ ಅಪೂರ್ವ ಸಹೋದರರು ಅಂತ ಲೇವಡಿ ಮಾಡಿದ ಗೌಡರು, ಇವಾಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ. ಒಬ್ಬ ಅಭ್ಯರ್ಥಿಯನ್ನು, ನಾನು ಅವರ ಹೆಸರು ಹೇಳೋದಿಲ್ಲ, ನಾನು ಹೆಸರು ಹೇಳಿದ್ರೆ ನಾನು ವೆಂಟಿಲೇಟರ್‌ನಲ್ಲೂ ಭಾಷಣ ಮಾಡೋಕೆ ಬರ್ತಾರೆ ಎಂದು ಬಹಳ ಲಘುವಾಗಿ ಮಾತಾಡಿದ್ರು. ಆದರೆ ನಾನು ನಿಮ್ಮ ಮುಂದೆ ಕೂತಿದ್ದೇನೆ. ಯಾವ ವೆಂಟಿಲೇಟರ್ ಇಲ್ಲ, ಕೈಯೂ ನಡಗಲ್ಲ ಅಂತ ದೇವೇಗೌಡರು ಹೇಳಿದ್ರು.
ನಾನು ದ್ವೇಷ, ಅಸೂಯೆಯಿಂದ ಹೇಳುತ್ತಿಲ್ಲ. ವೈಯಕ್ತಿಕವಾಗಿ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು. ಹಿರಿಯರಿಗೆ ಗೌರವ ಕೊಡುವ ಸೌಜನ್ಯ ಇಲ್ಲ. ನಾನು 11ನೇ ತಾರೀಖಿನ ತನಕ ಬರುತ್ತೇನೆ. ನನ್ನ ಮೊಮ್ಮಗನ ಗೆಲ್ಲಿಸಲು ಅಲ್ಲ. ನನ್ನ ಗುರಿ ಒಂದೇ, ಚಿಕ್ಕಬಳ್ಳಾಪುರದಲ್ಲಿ ಮೋದಿ ಮುಂದೆ ಹೇಳಿದ್ದೆ. ನನ್ನ ಜನರಿಗೆ ನೀರು ಕೊಡುವವರೆಗೂ ಇರುತ್ತೇನೆ.
ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ ಲೂಟಿ ಮಾಡ್ತಿದ್ದಾರೆ. ರೈತರ ಪರಿಸ್ಥಿತಿ ಕೂಡಾ ದುಸ್ಥಿತಿಗೆ ತಲುಪಿದೆ. ನೀರಿನ ಶಕ್ತಿ ಏನು ಅಂತ ನನಗೆ ಗೊತ್ತಿದೆ. ಮೋದಿಯವರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದೇನೆ. ಇನ್ನೂ ಒಂದೂವರೆ ವರ್ಷ ರಾಜ್ಯಸಭಾ ಸದಸ್ಯನಾಗಿ ಇರುತ್ತೇನೆ. ನಮ್ಮ ಎನ್‌ಡಿಎ ಪಕ್ಷದ 17 ಸಂಸದರು ಒಟ್ಟಿಗೆ ಹೋರಾಟ ಮಾಡಿ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ಇತ್ತಾ ಮಗನ ಗೆಲುವಿಗಾಗಿ ಕಳೆದ ನಾಲ್ಕು ದಿನದಿಂದ ಕ್ಷೇತ್ರದ ಬೀಡು ಬಿಟ್ಟಿರುವ ಕುಮಾರಸ್ವಾಮಿ ರಾಜ್ಯ ಬಿಜೆಪಿ ನಾಯಕರ ಜೊತೆ ಮತ ಭೇಟೆ ನಡೆಸುತ್ತಾರೆ. ಮೈತ್ರಿ ಇರುವ ಕಾರಣ ಈ ಕ್ಷೇತ್ರದಲ್ಲಿ ಸ್ವಲ್ಪ ಶ್ರಮ ಹಾಕಿದ್ರೆ ತಮ್ಮಮಗ ನಿಖಿಲ್ ಗೆಲ್ತಾನೆ ಎಂಬ ವಿಶ್ವಾಸದಲ್ಲಿರುವ ಹೆಚ್ ಡಿಕೆ ಕಾಲಿಗೆ ಚಕ್ರ ಕಟ್ಟಿಕೊಂಡು ಸಾಥ್ ಕೊಡ್ತಿರುವ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಜೊತೆಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.