ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್: ರಾಜ್ಯದ ಹಲವೆಡೆ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

Share to all

ಬೆಂಗಳೂರು: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಧಾರವಾಡ, ಮಂಡ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. ಅಲ್ಲದೇ ಹಲವು ಮಹತ್ತರ ದಾಖಲೆ ವಶಕ್ಕೆ ಪಡೆದಿದ್ದಾರೆ. ಮೊದಲಿಗೆ ಎಸ್‌ಪಿ ಎಂ.ಎಸ್.ಕೌಲಾಪುರೇ ನೇತೃತ್ವದಲ್ಲಿ ದಾವಣಗೆರೆಯ ಶಕ್ತಿನಗರದ 3ನೇ ಕ್ರಾಸ್‌ನಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಮೇಲೆ ದಾಳಿ ನಡೆದಿದೆ. ಸಹಾಯಕ ನಿರ್ದೇಶಕ ಕಮಲ್ ರಾಜ್ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

ಸಿಪಿಐ ಮಧುಸೂಧನ್, ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಮನೆಯ ಪ್ರತಿಯೊಂದು ಕೋಣೆಯನ್ನು ಪರಿಶೀಲನೆ ಮಾಡಿದ್ದಾರೆ.ಮತ್ತೊಂದೆಡೆ ಲೋಕಾಯುಕ್ತ ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ನಿವಾಸದ ಮೇಲೆ ದಾಳಿ ನಡೆದಿದೆ. ಧಾರವಾಡ ನಗರದ ಗಾಂಧಿನಗರ ಬಡಾವಣೆಯಲ್ಲಿನ ಮನೆ ಮೇಲೆ ದಾಳಿ ನಡೆದಿದ್ದು, ಆಸ್ತಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.

ಗೋವಿಂದಪ್ಪ ಭಜಂತ್ರಿಗೆ ಸಂಬಂಧಪಟ್ಟ ಆರು ಕಡೆ ದಾಳಿ ಮಾಡಲಾಗಿದೆ. ಧಾರವಾಡದಲ್ಲಿ ಮೂರು ಕಡೆ, ಸವದತ್ತಿ ತಾಲೂಕಿನಲ್ಲಿ ಎರಡು ಕಡೆ ಹಾಗೂ ನರಗುಂದದಲ್ಲಿ ಒಂದು ಕಡೆ ದಾಳಿ ನಡೆದಿದೆ. ಸವದತ್ತಿ ತಾಲೂಕಿನ ಹೂಲಿ ಹಾಗೂ ಉಗರಗೋಳ ಗ್ರಾಮದ ಫಾರ್ಮ್ ಹೌಸ್ ಮೇಲೆ ರೇಡ್ ಮಾಡಲಾಗಿದೆ. ಗೋವಿಂದಪ್ಪ ಕೆಲಸ ಮಾಡುವ ಲಕಮನಹಳ್ಳಿ ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ನರಗುಂದದಲ್ಲಿರೋ ಸಹೋದರನ ಮನೆ ಮೇಲೂ ದಾಳಿ ನಡೆದಿದೆ. ಗೋವಿಂದಪ್ಪನ ಮನೆ ಎದುರು ನಿಲ್ಲಿಸಿದ್ದ ಕಾರುಗಳ ಪರಿಶೀಲನೆ ಮಾಡಲಾಗಿದೆ.ಬೀದರ್‌ನಲ್ಲಿ ಎರಡು ಕಡೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಪೋಲಿಸರು ಶಾಕ್ ಕೊಟ್ಟಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಇನ್ನೂ ಹಾವೇರಿಯ ರಾಣೆಬೆನ್ನೂರು ಸಿಡಿಪಿಒ ಕಚೇರಿಯ ಎಫ್‌ಡಿಎ ರಾಜು ಸುವ್ರೆ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಇಂದು ನಸುಕಿನಲ್ಲಿ ದಾಳಿ‌ ಮಾಡಿದ್ದಾರೆ‌. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಈ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.ಕೆಲ‌ ಮಾಹಿತಿಗಳು ಬಂದಿದ್ದವು. ಅವುಗಳ ಪರಿಶೀಲನೆ ನಡೆಸಿದಾಗ ದಾಖಲೆಗಳು ಲಭ್ಯವಾಗಿದ್ದವು‌. ಅದನ್ನು ಆಧರಿಸಿ ರಾಜು ಸುವ್ರೆ ಮನೆ ಮೇಲೆ ದಾಳಿ ಮಾಡಲಾಗಿದೆ. ತಪಾಸಣೆ ನಡೆಯುತ್ತಿದ್ದು, ದಾಳಿ‌ ಮುಗಿದ ನಂತರ ಮತ್ತಷ್ಟು ಮಾಹಿತಿ ನೀಡಲಾಗುವುದು’ ಎಂದು ಪೊಲೀಸರು ಹೇಳಿದರು.


Share to all

You May Also Like

More From Author