ಮೂರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳು ಅಬ್ಬರದ ಪ್ರಚಾರ ಮಾಡಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ ಬರೆಯಲಿದ್ದಾನೆ. ಬೈ ಎಲೆಕ್ಷನ್ ನಡೀತಿರೋ ಕ್ಷೇತ್ರಗಳಲ್ಲಿ ಚುನಾವಣೆಗೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳಭವಿಷ್ಯವನ್ನು ಬರೆಯಲು ಮತಗಟ್ಟೆಯತ್ತ ಬರುತ್ತಿದ್ದಾರೆ. ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಬೆಳಗ್ಗೆ 7 ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಚನ್ನಪಟ್ಟಣದಲ್ಲಿ ಮತದಾನ ಆರಂಭವಾಗಿದೆ. ಮತದಾನ ಮಾಡಲು ಹಿರಿಯ ನಾಗರೀಕರು ಬೆಳ್ಳಂಬೆಳಗ್ಗೆಯೇ ಮತದಾನಕ್ಕೆ ಆಗಮಿಸಿತ್ತಿದ್ದಾರೆ. ಹೊಂಗನೂರಿನ ಮತಗಟ್ಟೆ ಕೇಂದ್ರಕ್ಕೆ ಬಂದು ಮತದಾರರು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಚನ್ನಪಟ್ಟಣ ರಣಕಣದಲ್ಲಿ ಜಾತಿವಾರು ಲೆಕ್ಕಾಚಾರ
ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯವಿದೆ. 1.05 ಲಕ್ಷದಷ್ಟಿರುವ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದೆ. 40 ಸಾವಿರ ಪರಿಶಿಷ್ಟ ಪಂಗಡ, 32 ಸಾವಿರ ಮುಸ್ಲಿಂ, 21 ಸಾವಿರ ಹಿಂದುಳಿದ ವರ್ಗ, 8 ಸಾವಿರ ಕುರುಬ, 10 ಸಾವಿರಕ್ಕೂ ಹೆಚ್ಚು ಇತರೆ ಮತಗಳಿವೆ.
ಶಿಗ್ಗಾಂವಿಯಲ್ಲಿ ಭರತ್ Vs ಯಾಸೀರ್ ಖಾನ್ ಪಠಾಣ್
ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕಣದಲ್ಲಿದರೆ, ಕಾಂಗ್ರೆಸ್‌ನಿಂದ ಯಾಸೀರ್ ಖಾನ್ ಪಠಾಣ್ ಸೇರಿ ಅಂತಿಮ ಕಣದಲ್ಲಿರುವ 8 ಅಭ್ಯರ್ಥಿಗಳಿದ್ದಾರೆ. ಇಲ್ಲೂ ಎರಡು ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.
ಶಿಗ್ಗಾಂವಿಯಲ್ಲಿ ಒಟ್ಟು 2,37,525 ಮತದಾರರಿದ್ದಾರೆ. ಈ ಪೈಕಿ ಪುರುಷರು 1,21,443 ಹಾಗೂ ಮಹಿಳೆಯರು 1,16,76 ಮತಗಳಿವೆ. ಒಟ್ಟು 241 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಪೈಕಿ 92 ಮತಗಟ್ಟೆಗಳು ಸೂಕ್ಷ್ಮವೆಂದು ಗುರ್ತಿಸಲಾಗಿದೆ. ಓರ್ವ ಎಎಸ್ಪಿ, ನಾಲ್ವರು ಡಿವೈಎಸ್ಪಿ, 12 ಸಿಪಿಐ, 24 ಪಿಎಸ್ಐ, 68 ಎಎಸ್ಐ ಸೇರಿ 716 ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಶಿಗ್ಗಾಂವಿಯಲ್ಲಿ ಜಾತಿವಾರು ಲೆಕ್ಕಾಚಾರ
ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಲಿಂಗಾಯತ 85 ಸಾವಿರ, ಮುಸ್ಲಿಂ 58 ಸಾವಿರ, ಕುರುಬ 27 ಸಾವಿರ, ಎಸ್ಸಿ, ಎಸ್ಟಿ 52 ಸಾವಿರ, ಇತರೆ 15 ಸಾವಿರ ಮತಗಳಿವೆ.
ಸಂಡೂರಿನಲ್ಲಿ ಅನ್ನಪೂರ್ಣ Vs ಬಂಗಾರು ಹನುಮಂತು
ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಹಾಗೂ ಬಿಜೆಪಿಯ ಬಂಗಾರು ಹನುಮಂತು ನಡುವೆ ನೇರಾ ಹಣಾಹಣಿ ನಡೆದಿದೆ. ಒಟ್ಟಾರೆ 7 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಸಂಡೂರಿನಲ್ಲಿ ಒಟ್ಟು 2,36,100 ಮತದಾರರಿದ್ದು, ಈ ಪೈಕಿ 1,18,282 ಮಹಿಳಾ ಮತದಾರರು, 1,17,789 ಪುರುಷ ಮತದಾರರಿದ್ದಾರೆ. ಒಟ್ಟು 253 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 55 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 1,215 ಸಿಬ್ಬಂದಿ, ಮೂವರು ಡಿವೈಎಸ್ಪಿ, 6 ಸಿಪಿಐ, 14 ಪಿಎಸ್ಐ, 22 ಎಎಸ್ಐ, 193 ಹೆಡ್ಕಾನ್ಸ್ಟೇಬಲ್, 14 ಕೆಎಸ್ಆರ್ಪಿ ತುಕಡಿ ಸೇರಿ 1500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.
ಸಂಡೂರಿನಲ್ಲಿ ಜಾತಿ ಲೆಕ್ಕಾಚಾರ
ಸಂಡೂರು ಎಸ್ಟಿ ಮೀಸಲು ಕ್ಷೇತ್ರವಾಗಿದೆ. ಎಸ್ಟಿ ಮತಗಳೇ ನಿರ್ಣಾಯಕ ಮತಗಳಾಗಿವೆ. ಎಸ್ಟಿ 68 ಸಾವಿರ, ಎಸ್ಸಿ 40 ಸಾವಿರ, ಲಿಂಗಾಯಿತ 38 ಸಾವಿರ, ಕುರುಬ ಮತಗಳು 34 ಸಾವಿರ, ಮುಸ್ಲಿಂ ಮತಗಳು 20 ಸಾವಿರ, ಇತರೆ 40 ಸಾವಿರ ಮತಗಳಿವೆ. ಒಟ್ಟಾರೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಮತೋತ್ಸವ ನಡೆಯಲಿದೆ. ನವೆಂಬರ್ 23 ಕ್ಕೆ ಫಲಿತಾಂಶ ಹೊರ ಬೀಳಲಿದೆ.