ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ, ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಸದ್ಯ ಹುಟ್ಟಿಕೊಂಡಿರುವ ದಿನ ಕಳೆದಂತೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಭದ್ರತೆಯ ಕಾರಣ ನೀಡಿ ಭಾರತ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದೆ.
ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಕಳುಹಿಸದಿರಲು ಭಾರತ ಸರ್ಕಾರ ನಿರ್ಧರಿಸಿದೆ. ಇತ್ತ ಪಾಕಿಸ್ತಾನ ಕೂಡ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಹಿಂದೇಟು ಹಾಕುತ್ತಿದೆ. ಈ ಕಾರಣದಿಂದಾಗಿ ಐಸಿಸಿ ಇನ್ನೂ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಸುಮಾರು 28 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಪರಿಸ್ಥಿತಿಯಲ್ಲಿಯೂ ಈ ಪಂದ್ಯಾವಳಿಯನ್ನು ಕಳೆದುಕೊಳ್ಳಲು ಪಾಕಿಸ್ತಾನ ಬಯಸುತ್ತಿಲ್ಲ. ಇದರಿಂದಾಗಿ ಭಾರತದ ಮನವೊಲಿಸುವ ಕೆಲಸಕ್ಕೆ ಮತ್ತೊಮ್ಮೆ ಕೈಹಾಕಿರುವ ಪಾಕಿಸ್ತಾನ, ಹೊಸ ಬೇಡಿಕೆಯನ್ನು ಭಾರತದ ಮುಂದಿಟ್ಟಿದೆ.
ಒಂದು ವೇಳೆ ಭಾರತ, ಚಾಂಪಿಯನ್ಸ್ ಟ್ರೋಫಿಯನ್ನು ಆಡದಿದ್ದರೆ, ಐಸಿಸಿಗೆ ತುಂಬಲಾರದ ನಷ್ಟವಾಗಲಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಪಾಕಿಸ್ತಾನದ ಕೈತಪ್ಪಿದರೆ ಅದಕ್ಕೂ ಸುಮಾರು 1800ಕೋಟಿ ರೂ. ನಷ್ಟವಾಗಲಿದೆ. ಹೀಗಾಗಿ ಪಾಕಿಸ್ತಾನ, ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಆ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟೀಂ ಇಂಡಿಯಾ ತನ್ನ ಗುಂಪು ಹಂತದ 3 ಪಂದ್ಯಗಳಲ್ಲಿ ಒಂದನ್ನಾದರೂ ಪಾಕಿಸ್ತಾನದಲ್ಲಿ ಆಡಬೇಕೆಂಬ ಬೇಡಿಕೆ ಇಟ್ಟಿದೆ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ಆಯೋಜಿಸಲು ಯೋಚಿಸಲಾಗಿದೆ.
ಇದನ್ನು ಹೊರತುಪಡಿಸಿ ಟೀಂ ಇಂಡಿಯಾ ಉಳಿದಿರುವ ತನ್ನ ಗ್ರೂಪ್ ಹಂತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲೇ ಆಡುವುದಕ್ಕೆ ಸಮ್ಮತ್ತಿ ಸೂಚಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ದವಾಗಿದೆ. ಒಂದು ವೇಳೆ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದರೆ, ಈ ಪಂದ್ಯವೂ ಪಾಕಿಸ್ತಾನದ ಹೊರಗೆ ನಡೆಯಲಿದೆ. ಆದರೆ ಟೀಂ ಇಂಡಿಯಾ ಫೈನಲ್ಗೆ ಬಂದರೆ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬರಬೇಕು ಎಂಬುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮತ್ತೊಂದು ಬೇಡಿಕೆಯಾಗಿದೆ. ಕರಡು ವೇಳಾಪಟ್ಟಿಯ ಪ್ರಕಾರ, ಈ ಅಂತಿಮ ಪಂದ್ಯ ಲಾಹೋರ್ನಲ್ಲಿ ನಡೆಯಲಿದೆ. ಈ ಪ್ರಕಾರ, ಭಾರತ ಎರಡು ಪಂದ್ಯಗಳನ್ನ ಪಾಕಿಸ್ತಾನದಲ್ಲಿ ಆಡಿದರೆ, ಉಳಿದ ಪಂದ್ಯಗಳನ್ನು 2023 ರ ಏಷ್ಯಾಕಪ್ನಂತೆಯೇ ಯುಎಇ ಅಥವಾ ಶ್ರೀಲಂಕಾದಲ್ಲಿ ಆಡಲಿದೆ.
ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದ 2008 ರಿಂದ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡಿಲ್ಲ. ಈ ಕಾರಣದಿಂದಾಗಿ, ಎರಡು ತಂಡಗಳ ನಡುವೆ ಯಾವುದೇ ಸರಣಿಗಳನ್ನು ಆಡಲಾಗುತ್ತಿಲ್ಲ. ಆದರೆ ಎರಡೂ ತಂಡಗಳು ಐಸಿಸಿ ಪಂದ್ಯಾವಳಿಗಳು ಮತ್ತು ಏಷ್ಯಾಕಪ್ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಹೀಗಾಗಿಯೇ ಟೀಂ ಇಂಡಿಯಾ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲು ಬಯಸಿದೆ. 2023ರ ಏಷ್ಯಾಕಪ್ನ ಆತಿಥ್ಯವನ್ನೂ ಸಹ ಪಾಕಿಸ್ತಾನ ಪಡೆದುಕೊಂಡಿತ್ತು. ಆದರೆ ಆಗಲೂ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡಿರಲಿಲ್ಲ. ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿದ್ದು, ಫೈನಲ್ ಕೂಡ ಇಲ್ಲಿಯೇ ನಡೆದಿತ್ತು. ಹೀಗಿರುವಾಗ ಪಿಸಿಬಿಯ ಹೊಸ ಪ್ರಸ್ತಾವನೆಯನ್ನು ಬಿಸಿಸಿಐ ಒಪ್ಪಿಕೊಳ್ಳುತ್ತದೋ ಇಲ್ಲವೋ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.