ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಪುಂಡರನ್ನ ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಂಭು ತಡಸ ಹಾಗೂ ಮೆಹಬೂಬ್ ಹಿತ್ತಲಮನಿ ಪ್ರಮುಖ ಆರೋಪಿಗಳಾಗಿದ್ದು, ಸಾಗರ ಸಾತಪುತೆ, ಶ್ರೀವತ್ಸವ ಬೆಂಡಿಗೇರಿ, ಸಚಿನ ನರೇಂದ್ರ, ಪ್ರಮುಖ ಆರೋಪಿಗಳಿಗೆ ಸಾಥ್ ನೀಡಿದ್ದಾರೆ.
ಪ್ರಮುಖ ಆರೋಪಿಗಳು ಹಾಗೂ ಸಾಥ್ ನೀಡಿದ ಆರೋಪಿಗಳು ಸೇರಿದಂತೆ ಐದು ಜನ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಬಂಧಿತರಿಂದ ಐದು ಮೊಬೈಲ್ ಫೋನ್ ಹಾಗೂ ಒಂದು ದ್ವೀಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣ ದಾಖಲಾಗಿದೆ.
14 ವರ್ಷದ ಬಾಲಕಿ ಶಾಲೆ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಕಿಡಿಗೇಡಿಗಳಿಬ್ಬರು ಬೈಕ್ ಮೇಲೆ ಬಂದಿದ್ದು, ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದರು. ಈ ಕುರಿತು ಸಿಸಿ ಕ್ಯಾಮರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿದ್ದವು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.
ಇನ್ನೂ ನಗರದ ಶಾಲೆ-ಕಾಲೇಜು, ಮಾರುಕಟ್ಟೆ, ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ ತೋರುವ ದುಷ್ಟರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.