ಬೆಂಗಳೂರು: ಕಳೆದ 20 ವರ್ಷಗಳಿಂದ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ನಡೆದ ಅನೇಕ ಎನ್ಕೌಂಟರ್ಗಳಲ್ಲಿ ವಿಕ್ರಮ್ ಗೌಡ ತಪ್ಪಿಸಿಕೊಂಡಿದ್ದ. ನಿನ್ನೆ ಸಂಜೆ ವಿಕ್ರಮ್ ಗೌಡ ಎನ್‌ಕೌಂಟರ್ ಆಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ.
ಆತನ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದರು. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಸೋಮವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಆತ ಆತ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಆತನ ಜತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗಿಯಿತು ಅಂದುಕೊಂಡಿದ್ದೆವು. ಆದರೆ, ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆದರು. ನಂತರ ಅವರಿಬ್ಬರೂ ತಪ್ಪಿಸಿಕೊಂಡು ಹೋದರೆಂದು ಕೂಂಬಿಂಗ್ ಆಪರೇಷನ್ ನಡೆಸಲಾಯ್ತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೆಯುತ್ತಿತ್ತು. ಆಗ ಇದ್ದಕಿದ್ದ ಹಾಗೆ ವಿಕ್ರಂ ಗೌಡ ಬರುವ ಮಾಹಿತಿ ಸಿಕ್ಕಿತ್ತು. ಆತನ ಎನ್‌ಕೌಂಟರ್ ಮಾಡುವುದು ಆ ಸಂದರ್ಭದಲ್ಲಿ ಪೊಲೀಸರಿಗೆ ಅನಿವಾರ್ಯವಾಯಿತು ಎಂದು ಅವರು ತಿಳಿಸಿದರು.