ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡಗಳ ಆಪರೇಷನ್ ದೊಡ್ಡ ಮಟ್ಟಿಗೆ ನಡೆಯುತ್ತಿದೆ. ಬಿಪಿಲ್ಗಳನ್ನು ಎಪಿಎಲ್‌ಗೆ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಬಡಜನರು ಕಂಗಾಲಾಗಿದ್ದಾರೆ. ಈ ಬೆನ್ನಲ್ಲೇ ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಕಾರ್ಡ್‌ಗಳ ಪರಿಷ್ಕರಣೆಯನ್ನು ಕೈಬಿಡಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದರೆ, ಉಳಿದೆಲ್ಲ ಕಾರ್ಡ್‌ಗಳೂ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಮುಂದಿನ ದಿನಗಳಲ್ಲಿ ಪರಿಷ್ಕರಣೆಗೆ ಒಳಪಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ.
ಯಾವುದೇ ಅರ್ಹ ಬಿಪಿಎಲ್, ಎಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿಲ್ಲ. ಕೇವಲ ಬಿಪಿಎಲ್ ಕಾರ್ಡ್ ಪರಿಶೀಲಿಸಿ ಅನರ್ಹರನ್ನ, ಎಪಿಎಲ್‌ಗೆ ಸೇರಿಸಲಾಗಿದೆ. ಆದಾಯ ತೆರಿಗೆ ಪಾವತಿ, ಸರ್ಕಾರಿ ನೌಕರರು ಹೊರತುಪಡಿಸಿ ಉಳಿದ ಯಾರದ್ದೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿಲ್ಲ ಎಂದು ಹೇಳಿದರು.
ಎಲ್ಲ ಕಾರ್ಡ್‌ಗಳು ಯಥಾಸ್ಥಿತಿಯಲ್ಲೇ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಪರಿಷ್ಕರಣೆಗೆ ಒಳಪಟ್ಟು, ಅಮಾನತುಗೊಂಡಿರುವ ಕಾರ್ಡ್‌ಗಳನ್ನು ಒಂದು ವಾರದೊಳಗಾಗಿ ನೀಡಿ ಅಕ್ಕಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಬಡವರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು.