ಮಂಡ್ಯ: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಭ್ಯರ್ಥಿಗಳಿಗೆ ಎದೆಯಲ್ಲಿ ಡವಡವ ಶುರುವಾಗಿದೆ. ಇದರ ಬೆನ್ನಲ್ಲೇ ಟೋಲ್ ಕಟ್ಟಿ ಎಂದಿದ್ದಕ್ಕೆ ಮೈ-ಬೆಂ ಹೆದ್ದಾರಿಯಲ್ಲಿ ರಾಜಕೀಯ ಪುಡಾರಿಗಳು ಟೋಲ್ ದುಡ್ಡು ಕಟ್ಟದೇ ಧಿಮಾಕು ಪ್ರದರ್ಶನ ಮಾಡಿದ್ದಾರೆ. ಅದಲ್ಲದೆ ಕೈ ಮುಖಂಡ ಕ್ಯಾತೆ ತೆಗೆದು ಜಗಳ ಮಾಡಿ ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ನಲ್ಲಿ ನಡೆದಿದೆ.
ನಾನು ಕಾಂಗ್ರೆಸ್ ನಾಯಕ, ಟೋಲ್ ದುಡ್ಡು ಕಟ್ಟಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಟೋಲ್ ದುಡ್ಡು ಕಟ್ಟಲೇಬೇಕೆಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳೆ ಕೆಳಗೆ ಇಳಿದು ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜುಟ್ಟು ಹಿಡಿದು ಎಳೆದಾಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಬಂದರೂ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ದೂರನ್ನು ದಾಖಲಿಸಿಕೊಳ್ಳದೇ ಅವರನ್ನ ಸ್ಥಳದಿಂದ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.