ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿ ವರ್ಷದಂತೆ ಈ ಬಾರಿಯೂ ದೊಡ್ಡ ತಪ್ಪನ್ನೇ ಮಾಡಿಬಿಟ್ಟಿದೆ. ಕೈಗೆಟುಕುವ ದರದಲ್ಲೇ ಆಟಗಾರರು ಸಿಕ್ತಿದ್ದರೂ ಖರೀದಿಸದೆ ಕೈಕಟ್ಟಿ ಕುಳಿತಿತ್ತು. ಅದರಲ್ಲೂ ಮುಖ್ಯವಾಗಿ ಟೀಮ್ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಖರೀದಿಗೆ ಒಲವು ತೋರದೇ ಇರುವುದು ಬೆಂಗಳೂರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಐಪಿಎಲ್ ಮೆಗಾ ಹರಾಜಿನ ಮೊದಲ ದಿನದ ಬಿಡ್ಡಿಂಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 6 ಆಟಗಾರರನ್ನು ಖರೀದಿಸಿದೆ. ಈ ಆರು ಆಟಗಾರರಲ್ಲಿ ಮೂವರು ಭಾರತೀಯರು, ಮೂವರು ವಿದೇಶಿ ಆಟಗಾರರಿದ್ದಾರೆ.
ಇವರಲ್ಲಿ ಅತ್ಯಧಿಕ ಮೊತ್ತ ಪಡೆದ ಭಾರತೀಯ ಆಟಗಾರನೆಂದರೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜಿತೇಶ್ ಶರ್ಮಾ ಅವರನ್ನು ಈ ಬಾರಿ ಆರ್ಸಿಬಿ ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿದೆ.
ಕೆಎಲ್ ರಾಹುಲ್ ಅವರ ಖರೀದಿಗೆ ಆರ್ಸಿಬಿ ಹೆಚ್ಚಿನ ಆಸಕ್ತಿವಹಿಸದಿರುವುದು. ಅಂದರೆ ಮೊದಲ ಸುತ್ತಿನಲ್ಲಿ ಒಂದಷ್ಟು ಬಿಡ್ಡಿಂಗ್ ನಡೆಸಿದ ಆರ್ಸಿಬಿ ಕೆಎಲ್ ರಾಹುಲ್ ಅವರ ಮೌಲ್ಯ 7 ಕೋಟಿ ರೂ. ದಾಟುತ್ತಿದ್ದಂತೆ ಬಿಡ್ಡಿಂಗ್ ನಿಲ್ಲಿಸಿದ್ದರು.
ಅಂದರೆ ಕೆಎಲ್ ರಾಹುಲ್ಗಾಗಿ 7 ಕೋಟಿ ರೂ.ಗಿಂತ ಅಧಿಕ ಮೊತ್ತ ವ್ಯಯಿಸಲು ಆರ್ಸಿಬಿ ಮುಂದಾಗಲಿಲ್ಲ. ಆದರೆ ಅಚ್ಚರಿ ಎಂದರೆ, ಇದೇ ಆರ್ಸಿಬಿ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿದರು. ಇಲ್ಲಿ ಎಲ್ಲಾ ರೀತಿಯಲ್ಲೂ ಜಿತೇಶ್ ಶರ್ಮಾಗಿಂತ ಕೆಎಲ್ ರಾಹುಲ್ ಉತ್ತಮ ಆಯ್ಕೆಯಾಗಿತ್ತು.
ಇದಾಗ್ಯೂ ಆರ್ಸಿಬಿ ಆಕ್ಷನ್ ಬಳಗವು ರಾಹುಲ್ ಖರೀದಿಗಾಗಿ ಹೆಚ್ಚಿನ ಆಸಕ್ತಿವಹಿಸದಿರುವುದು ಅಚ್ಚರಿಕೆಗೆ ಕಾರಣವಾಗಿತ್ತು. ಒಂದು ವೇಳೆ ಆರ್ಸಿಬಿ ಜಿತೇಶ್ ಶರ್ಮಾಗೆ ವ್ಯಯಿಸಿದ 11 ಕೋಟಿ ರೂ.ಗಿಂತ ಒಂದೆರಡು ಕೋಟಿ ರೂ. ಹೆಚ್ಚು ನೀಡಿದ್ದರೂ ರಾಹುಲ್ ಆರ್ಸಿಬಿ ಪಾಲಾಗುತ್ತಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಖರೀದಿಸಿದ್ದು 14 ಕೋಟಿ ರೂ.ಗೆ. ಆರ್ಸಿಬಿ ಫ್ರಾಂಚೈಸಿಯು ನಿರಾಸಕ್ತಿ ತೋರಿದ್ದರಿಂದ ಇದೀಗ ತವರಿನ ತಂಡದ ಪರ ಮತ್ತೆ ಕಣಕ್ಕಿಳಿಯಬೇಕೆಂಬ ಕೆಎಲ್ ರಾಹುಲ್ ಅವರ ಕನಸು ಕಮರಿದೆ.