ಬೆಂಗಳೂರು: ರಾಜ್ಯದಲ್ಲಿ ಮೂಡಾ ಹಗರಣ ಭಾರೀ ಸದ್ದು ಮಾಡುತ್ತಿದೆ. ಸದ್ಯ ಹಗರಣದ ಉರುಳು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೂ ಸುತ್ತಿಕೊಂಡಿದ್ದು, ಇದೀಗ ಸಿಎಂ ಪತ್ನಿ ಹಾಗೂ ಸಿಎಂ ಭಾಮೈದ ಸೇರಿ ಒಟ್ಟು 10 ಜನರ ಮೇಲೆ ಈಗ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಭೂ ವ್ಯಾಜ್ಯ ಸಂಬಂಧ ಕೇಸ್ ದಾಖಲಾಗಿದೆ.
ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜ್ ಕೆಸರೆ ಭಾಗದಲ್ಲಿ ಮೂರುವರೆ ಎಕರೆ ಜಮೀನು ಮಾರಿದ್ದರು. ಈಗ ಆ ಜಮೀನು ದೇವರಾಜ್ ಅವರದ್ದಲ್ಲ. ಆ ಜಮೀನು ತಮ್ಮದ್ದು ಎಂದು ದೇವರಾಜ್ ಸಹೋದರ ಮೈಲಾರಯ್ಯನ ಮಗಳು ಜಮುನಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ನನ್ನ ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿದ್ದಾರೆ. ನನ್ನ ತಂದೆಯ ಪಾಲಿನ ಜಾಗವನ್ನು ಮೋಸದಿಂದ ಬರೆಸಿಕೊಂಡು ಈಗ ಬೇರೆಯವರಿಗೆ ಮಾರಿದ್ದಾರೆ. ನಮಗೆ ನ್ಯಾಯ ಬೇಕು ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಖಾತೆ ಮಾಡಿಸಿಕೊಡುವ ಹೆಸರಿನಲ್ಲಿ ಸಹಿ ಪಡೆದು ಮೋಸ ಮಾಡಿದ್ದಾರೆ. ನಮಗೆ ಈ ಜಮೀನು ವಿಚಾರ ಮಾಧ್ಯಮದ ಮೂಲಕ ಗೊತ್ತಾಗಿದೆ. ಹೀಗಾಗಿ ಈಗ ಕೇಸ್ ಹಾಕಿದ್ದೇವೆ ಎಂದು ಮೈಲಾರಯ್ಯನ ಮಗಳು ಜಮುನಾ ಹೇಳಿದ್ದಾರೆ.
ಖಾತೆ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ನನ್ನ ಚಿಕ್ಕಪ್ಪ ಮೂವತ್ತು ವರ್ಷಗಳ ಹಿಂದೆ ನನ್ನ ಹಾಗೂ ನನ್ನ ತಾಯಿ ಬಳಿ ಸಹಿ ಮಾಡಿಸಿಕೊಂಡಿದ್ದರು. ಆ ಜಮೀನು ನನ್ನ ತಂದೆಗೆ ಭಾಗವಾಗಿ ಬಂದ ಪಿತ್ರಾರ್ಜಿತ ಆಸ್ತಿ. ಆ ಆಸ್ತಿಯನ್ನೆ ಮೋಸದಿಂದ ನನ್ನ ಚಿಕ್ಕಪ್ಪ ಪಡೆದು ಅದನ್ನು ಸಿಎಂ ಕುಟುಂಬಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.