ಹುಬ್ಬಳ್ಳಿ: ಹಾಡ ಹಗಲೇ ಸಿಲಿಂಡರ್ ರೀಫಿಲ್ಲಿಂಗ್ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ತಹಸೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿ 470 ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಹಸೀಲ್ದಾರ್ ಡಿ.ಎಚ್. ಹೂಗಾರ ನೇತೃತ್ವದ ತಂಡ, ಧಾರವಾಡ ಸಮೀಪದ ಜೋಗೆಲ್ಲಾಪುರದ ಬನಶಂಕರಿ ಎಂಟರ್ ಪ್ರೈಜಿಸ್ ನ ಎಚ್.ಪಿ. ಗ್ಯಾಸ್ ಸಲಿಂಡರ್ ಗೋಡೌನ್ ನಲ್ಲಿ ರೀಫಿಲ್ಲಿಂಗ್ ಗೆ ಬಳಸುತ್ತಿದ್ದ ಯಂತ್ರಗಳನ್ನೂ ವಶಕ್ಕೆ ಪಡೆದಿದ್ದಾರೆ.
ದಂಧೆಕೋರರು ಅವ್ಯಾಹತವಾಗಿ ಸಿಲಿಂಡರ್ ರೀಫಿಲ್ಲಿಂಗ್ ನಡೆಸುತ್ತಿದ್ದರು ಎನ್ನಲಾಗಿದ್ದು ಅಧಿಕಾರಿಗಳು ಸ್ಥಳಕ್ಕೆ ಬರುವ ಮಾಹಿತಿ ಪಡೆದು, ಎಲ್ಲ ಸಾಮಾನು ಸಂರಂಜಾಮುಗಳನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಅನೇಕ ಕುರುಹುಗಳನ್ನು ಅಲ್ಲೇ ಬಿಟ್ಟಿದ್ದಾರೆ.
ಎಚ್.ಪಿ. ಸಿಲಿಂಡರ್ ಗುಡೌನ್ ನಲ್ಲಿ ಭಾರತ ಗ್ಯಾಸ್ ಕಂಪನಿಯ ಮತ್ತು ಗೋ ಗ್ಯಾಸ್ ಕಂಪನಿಯ ಸೀಲ್ಗಳು ಲಭ್ಯವಾಗಿವೆ.
ಮೇಲ್ನೋಟಕ್ಕೆ ಇದು ಸಿಲಿಂಡರ್ ರ್ರೀಫಿಲ್ಲಿಂಗ್ ದಂಧೆ ಎಂದು ಅನುಮಾನ ವ್ಯಕ್ತಪಡಿಸಿದ ತಹಸೀಲ್ದಾರರು ಗೋಡೌನ್ ಸೀಜ್ ಮಾಡಿದ್ದು ಧಾರವಾಡ ಗ್ರಾಮೀಣ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸುವಂತೆ ಆಹಾರ ಮತ್ತು ನಾಗರಿಕ ಪೋರೈಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.