ಹುಬ್ಬಳ್ಳಿ ಕಿಮ್ಸ್ ಗೆ ಹೆಚ್ಚುವರಿ ಅನುದಾನಕ್ಕೆ ಪತ್ರ.
ಕೇಂದ್ರ ಸಚಿವ ಜೋಷಿ ನಡೆ ಹಾಸ್ಯಾಸ್ಪದ ಕಾಂಗ್ರೆಸ್ ಯುವ ನಾಯಕ ರಜತ್ ಲೇವಡಿ
ಹುಬ್ಬಳ್ಳಿ:-ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ ಆರೋಗ್ಯ ಸೇವೆ ನೀಡುತ್ತಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ- ಕಿಮ್ಸ್ ಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಯುವ ನಾಯಕರೂ ಆದ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಸ್ಪರ್ಧಾಕಾಂಕ್ಷಿ ರಜತ್ ಉಳ್ಳಾಗಡ್ಡಿ ಮಠ ಲೇವಡಿ ಮಾಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಆಡಳಿತದಲ್ಲಿ ಇತ್ತು..!? ಆ ಸಮಯದಲ್ಲಿ ಕಮಲ ಪಕ್ಷದ ನಾಯಕರಿಗೆ ಕಿಮ್ಸ್ಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಮನಸ್ಸು ಇರಲಿಲ್ಲವೇ? ಆಗ ಜನಹಿತ ಮರೆತಿದ್ದರೆಯೇ.!? ಈಗ ಕೇಂದ್ರ ಸಚಿವರು ಕಿಮ್ಸ್ ಸಂಸ್ಥೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದು ಆಗ್ರಹಿಸಿರುವುದು ನಗೆಪಾಟಿಲಿನ ಸಂಗತಿಯೇ ಸರಿ ಎಂದು ರಜತ್ ಉಳ್ಳಾಗಡ್ಡಿ ಮಠ ಹೇಳಿದ್ದಾರೆ.
ಕೇಂದ್ರ ಸಚಿವರ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾಗ ಒಮ್ಮೆಯೂ ಕಿಮ್ಸ್ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಆದರೆ, ಈಗ ಏಕಾಏಕಿ ಬಿಜೆಪಿ ಕಿಮ್ಸ್ ನೆಪದಲ್ಲಿ ಕಾಂಗ್ರೆಸ್ ಮುಂದೆ ಬೇಡಿಕೆ ಸಲ್ಲಿಸುವುದು ಯಾವ ರೀತಿ ಸರಿ..!? ತಮ್ಮ ಪಕ್ಷದ ಸರ್ಕಾರ ಇದ್ದಾಗ ಕಿಮ್ಸ್ ಸಂಸ್ಥೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಹೇಳಲು ಧೈರ್ಯ ಇರಲಿಲ್ಲವೇ.!? ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಮ್ಸ್ ಗೆ ಬಿಡುಗಡೆಯಾದ ಹೆಚ್ಚುವರಿ ಅನುದಾನವಾದರೂ ಎಷ್ಟು ಎಂದು ಕೇಂದ್ರ ಸಚಿವರನ್ನು ರಜತ್ ಉಳ್ಳಾಗಡ್ಡಿ ಮಠ ಪ್ರಶ್ನಿಸಿದ್ದಾರೆ.
ಸಚಿವ ಪ್ರಲ್ಹಾದ್ ಜೋಷಿಯವರು ಬರೀ ದಿಲ್ಲಿ ರಾಜಕೀಯದಲ್ಲೇ ಬ್ಯುಸಿಯಾಗಿದ್ದು, ಜನಹಿತ ಮತ್ತು ಕ್ಷೇತ್ರವನ್ನು ಮೆರೆತಿದ್ದಾರೆ. ರಾಜ್ಯದಲ್ಲಿ ಜನಪರವಾದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಅಪನಂಬಿಕೆ ಮೂಡಲಿಯೆಂದು ಇಲ್ಲಸಲ್ಲದ ಇಂತಹ ಹೇಳಿಕೆ, ಆಗ್ರಹಗಳನ್ನು ಅವರು ಮಾಡುತ್ತಿದ್ದಾರೆ. ಈ ನಡೆ ಅವರಿಗೆ ಶೋಭೆ ತರುವಂತಹದ್ದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಆಸ್ಪತ್ರೆಗಳಿಗೆ ಅನುದಾನ ನೀಡಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎನ್ನುವುದನ್ನು ಕೇಂದ್ರ ಸಚಿವರು ಮನಗಾಣಬೇಕೆಂದು ಕಾಂಗ್ರೆಸ್ ಯುವ ನಾಯಕ ರಜತ್ ಉಳ್ಳಾಗಡ್ಡಿ ಮಠ ತಿರುಗೇಟು ನೀಡಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ