ಚನ್ನವೀರಯ್ಯ ಫಕ್ಕೀರೇಶ್ವರ ಆಗಿದ್ದು ಹೇಗೆ.ಶಿರಹಟ್ಟಿಯಲ್ಲಿ ಮಠ ಕಟ್ಟಿದ್ದು ಯಾವಾಗ ? ಈ ಕುರಿತು ಒಂದು ವಿಶೇಷ ವರದಿ.
ಹುಬ್ಬಳ್ಳಿ:-ಹಿಂದೂ ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ಮಧ್ಯೆ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಮಠ ವಿಭಿನ್ನವಾಗಿ ನಿಲ್ಲುತ್ತದೆ.
ಸುಮಾರು 500 ವರ್ಷಗಳಿಂದ ಹಿಂದೂ ಮುಸ್ಲಿಮರ ಮಧ್ಯೆ ಸಾಮರಷ್ಯದ ಭಾವನೆ ಬೆಳೆಯಲು ಫಕೀರೇಶ್ವರ ಮಠ ನಿರಂತರವಾಗಿ ಶ್ರಮಿಸುತ್ತಿದೆ. ಶ್ರೀ ಮಠದ ಆಚರಣೆ ಸಂಪ್ರದಾಯ ವಿಶಿಷ್ಟ,ವಿಶೇಷ ಮಠದ ಇತಿಹಾಸ ಕೆದಕಿದಾಗ ವಿಜಯಪುರ ಜಿಲ್ಲೆಯ ದರ್ಗಾದಿಂದ ಆರಂಭಗೊಳ್ಳುತ್ತದೆ.
500 ವರ್ಷಗಳ ಹಿಂದೆ ವಿಜಯಪುರದ ಶಿವಯ್ಯ ಗಂಗಯ್ಯ ಎಂಬ ದಂಪತಿಗಳಿಗೆ ಚೆನ್ನವೀರಯ್ಯ ಎಂಬ ಮಗು ಅಲ್ಲಿನ ಸ್ಥಳಿಯ ಮೌಲ್ವಿ ಖಾಜಾ ಅಮೀನುದ್ದಿನ್ ಆಶೀರ್ವಾದದಿಂದ ಜನಿಸುತ್ತದೆ. ಖಾಜಾ ಅಮೀನುದ್ದೀನ್ ಕೂಡ ಭಾವೈಕ್ಯತೆಯ ಹರಿಕಾರರಾಗಿದ್ದರು. ಅವರನ್ನು ಹಿಂದೂಗಳು ಬ್ರಹ್ಮಾನಂದ ಎಂದು ಕರೆದರೆ ಮುಸ್ಲಿಮರು ಖಾಜಾ ಮೈನುದ್ದೀನ್ ಎಂದು ಕರೆಯುತ್ತಿದ್ದರು.
ಚನ್ನವೀರಯ್ಯ ನಾಲ್ಕು ವರ್ಷದವನಿದ್ದಾಗ ಮಾರಣಾಂತಿಕ ಕಾಯಿಲೆಯಿಂದ ಬಳಲತೊಡಗಿದ್ದ ವೈದ್ಯರಿಂದ ಗುಣವಾಗದೆ ಇದ್ದಾಗ ಶಿವಯ್ಯ ಮತ್ತು ಗಂಗಮ್ಮ ಚನ್ನವೀರಯ್ಯ ನನ್ನ ದರ್ಗಾದಲ್ಲಿ ಬಿಟ್ಟು ಬಂದುಬಿಡುತ್ತಾರೆ. ಆ ಮಗುವನ್ನ ಖಾಜಾ ಮೈನುದ್ದೀನ್ ಆರೈಕೆ ಮಾಡಿ ಬೆಳೆಸುತ್ತಾರೆ. ಆ ಮಗುವಿಗೆ ಮುಸ್ಲಿಂ ಹಾಗೂ ಹಿಂದೂ ಧರ್ಮದ ದೀಕ್ಷೆ ನೀಡುತ್ತಾರೆ.
ಎಲ್ಲ ಧರ್ಮ ಗ್ರಂಥಗಳ ಅರಿವು ಮೂಡಿಸುತ್ತಾರೆ.ಮುಂದೆ ಆ ಮಗುವೆ ಫಕೀರೇಶ್ವರ ಎಂದು ಪ್ರಖ್ಯಾತವಾಗುತ್ತಾರೆ. ಮುಂದೆ ನಾಡಿನಾದ್ಯಂತ ಸಂಚರಿಸಿ ಶಿರಹಟ್ಟಿಯಲ್ಲಿ ಫಕೀರೇಶ್ವರ ಭಾವೈಕ್ಯತಾ ಮಠ ಸ್ಥಾಪಿಸುತ್ತಾರೆ.
ಈ ಪಕೀರೇಶ್ವರ ಮಠಕ್ಕೆ ಅಂದಿನ ಕಾಲದಲ್ಲಿ ಹೈದರಾಬಾದ್ ನಿಜಾಮನಿಂದ ಹಿಡಿದು ಮೈಸೂರು ಅರಸರವರೆಗೆ ಎಲ್ಲ ದೊರೆಗಳು ಮಠದ ಶಿಷ್ಯರಾಗಿದ್ದರು. ಅಂದಿನಿಂದ ಇಂದಿನವರೆಗೂ ಮಠ ಹಿಂದೂ ಮುಸ್ಲಿಮರಲ್ಲಿ ಸಾಮರಸ್ಯ ತರಲು ಪ್ರಯತ್ನಿಸುತ್ತಿದೆ.
ಮೂಲ ಗುರುಗಳಾದ ಫಕೀರೇಶ್ವರ ಆದಿಶೇಷನ ಅವತಾರ ತಾಳಿ ಮಠದ ಹುತ್ತದಲ್ಲಿ ಕಣ್ಮರೆಯಾದರು. ಹೀಗಾಗಿ ಹುತ್ತಯಿದ್ದ ಸ್ಥಳವನ್ನೇ ಮೂಲಪೀಠ ಎಂದು ಪರಿಗಣಿಸಲಾಗುತ್ತದೆ. ಅಲ್ಲಿಯೇ ಗದ್ದುಗೆ ಸ್ಥಾಪಿಸಿ ಕರ್ತೃಗಧಿಗೆ ಎಂದು ನಂಬಿ ಪೂಜಿಸಲಾಗುತ್ತಿದೆ.
ಮೂಲಗುರುಗಳನ್ನು ಹೊರತುಪಡಿಸಿ ಇಲ್ಲಿಯವರೆಗೆ 13 ಪೀಠಾಧಿಪತಿಗಳು ಕಾಲಯ ಕಾಲಕ್ಕೆ ಈ ಭಾವೈಕ್ಯತಾಪೀಠವನ್ನು ಅಭಿವೃದ್ಧಿ ಕಡೆ ಒಯ್ದಿದ್ದಾರೆ. ಹೀಗಾಗಿ ಮಠದಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆ ಲಭಿಸಿದೆ. ಮಠ ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ. ಮಠದಲ್ಲಿದೆ ವಿಶಿಷ್ಟ ವಿಶೇಷ ಆಚರಣೆಗಳು.
ಶಿರಹಟ್ಟಿ ಫಕೀರೇಶ್ವರ ಮಠ ನಾಡಿನದ್ದಕ್ಕೂ 60 ಶಾಖಾಮಠಗಳನ್ನು ಹೊಂದಿದೆ. ವಿಶೇಷ ಅಂದರೆ ಐದು ಶಾಖ ದರ್ಗಾಗಳನ್ನು ಕೂಡ ಮಠ ಹೊಂದಿದೆ. ಈ ಶಾಖ ದರ್ಗಾಗಳಲ್ಲಿ ಮುಸ್ಲಿಂ ಸಂಪ್ರದಾಯದಂತೆ ಪಾಂಚಾಗಳನ್ನ ಇಟ್ಟು ಪೂಜಿಸಲಾಗುತ್ತದೆ.ಆದರೆ ಪಾಂಚಾಗಳಿಗೆ ಲಿಂಗಾಯತ ಪದ್ದತಿಯಂತೆ ರುದ್ರಾಕ್ಷಿ ಲಿಂಗ ಭಸ್ಮ ಧಾರಣೆ ಮಾಡಲಾಗುತ್ತದೆ. ಇಲ್ಲಿನ ಪೂಜಾರಿ ಮುಸ್ಲಿಮನಾದರೂ ಕೂಡ ಲಿಂಗಾಯತರಂತೆ ಲಿಂಗಧಾರಣೆಯಾಗಿ ಪಾಂಜಗಳನ್ನ ಪೂಜಿಸುತ್ತಾರೆ.
ಈ ದರ್ಗಾಗಳು ಶಿರಹಟ್ಟಿ ಸಂಶಿ, ಧಾರವಾಡ, ಸೌದತ್ತಿ ಬಳಿಯ ಅಸುಂಡಿ,ಯರಗಟ್ಟಿ ಬಳಿಯ ಆಲದಕಟ್ಟಿಯಲ್ಲಿ ಕಂಡುಬರುತ್ತವೆ. ಮಠಕ್ಕೆ 2000 ಎಕರೆ ಜಮೀನಿದ್ದು ಜಮೀನಿನಿಂದ ಬರುವ ಆದಾಯವನ್ನು ಸಮಾಜದ ಏಳಿಗೆಗಾಗಿ ಬಳಸಲಾಗುತ್ತಿದೆ ವಿಶೇಷ ಅಂದರೆ ಶಿರಹಟ್ಟಿ ಮಠದ ಪೀಠಾಧಿಪತಿ ಆಗುವವರಿಗೆ ಫಕೀರ ದೀಕ್ಷೆ ಕಡ್ಡಾಯ.
ಪೀಠಕ್ಕೆ ಕೂಡುವುದಕ್ಕಿಂತ ಮೊದಲು ಮುಸ್ಲಿಂ ಪದ್ಧತಿಯಂತೆ ಫಕೀರ ದೀಕ್ಷೆ ನೀಡಲಾಗುತ್ತದೆ. ನಂತರ ಮುಸ್ಲಿಮರು ಲಿಂಗಾಯತರಿಗೆ ಪೀಠಾಧಿಪತಿಗಳನ್ನ ಹಸ್ತಾಂತರಿಸುತ್ತಾರೆ. ನಂತರ ಲಿಂಗಾಯಿತ ಪದ್ಧತಿಯಂತೆ ಪಟ್ಟಾಭಿಷೇಕ ನಡೆಯುತ್ತದೆ. ಪೀಠಾಧಿಪತಿ ಲಿಂಗೈಕರಾದ ಸಂದರ್ಭದಲ್ಲೂ ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯ ವಿಧಿ ವಿಧಾನಗಳು ನಡೆಯುತ್ತವೆ.
ಫಕೀರೇಶ್ವರ ಮಠದ ಪಲ್ಲಕ್ಕಿಯನ್ನು ಹೊರುವವರು ಮುಸ್ಲಿಮರು ಅನ್ನೋದು ವಿಶೇಷ.ವಿಜಯದಶಮಿಯ ದಿನ ಶಿರಹಟ್ಟಿಯ ಗರೀಬ್ ನಾನಾ ದರ್ಗಾಕ್ಕೆ ಪೀಠಾಧಿಪತಿ ಪೂಜೆ ಸಲ್ಲಿಸಿದ ನಂತರ ಆರಂಭವಾಗುತ್ತದೆ.ಇಂತಹ ವೈಶಿಷ್ಟ್ಯಗಳನ್ನ ಹೊಂದಿದ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ದಿಂಗಾಲೇಶ್ವರ ಶ್ರೀಗಳು ಶ್ರೀಗಳಾದ ನಂತರ ಬಹುದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ 13ನೇ ಪೀಠಾಧಿಪತಿ ಜಗದ್ಗುರು ಪಕೀರ ಸಿದ್ದರಾಮ ಮಹಾ ಸ್ವಾಮಿಗಳಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಠದ ಆನೆ ಚಂಪಿಕಾಗೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಷಷ್ಠ್ಯಬ್ಧಿ ಮಾಡಲಾಗುತ್ತಿದೆ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಭಾವೈಕ್ಯತಾ ರಥ ಸಂಚರಿಸಲಿದೆ.
ಹುಬ್ಬಳ್ಳಿಯಲ್ಲಿ ಇತಿಹಾಸದ ಪುಟದಲ್ಲಿ ದಾಖಲಾಗುವಂತಹ ಕಾರ್ಯಕ್ರಮ ನಡೆಸಲಾಗಿದೆ. ಆನೆ ಅಂಬಾರಿ ಸಹಿತ ಪೀಠಾಧಿಪತಿಗಳ ತುಲಾಭಾರ ಅದು 5,555 kg ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ನಡೆಸಲಾಗಿದೆ. ಭಾವೈಕ್ಯತಾ ರಥ ನಾಡಿನುದ್ದಕ್ಕೂ ಸಂಚಾರ ಮುಗಿಸಿದ ನಂತರ ಶಿರಹಟ್ಟಿಯಲ್ಲಿ ಪೀಠಾಧಿಪತಿಗಳ ಸುವರ್ಣ ತುಲಾಭಾರ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಉಳಿತಾಯವಾಗುವ ಎಲ್ಲ ಹಣವನ್ನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ದತ್ತು ನಿಧಿ ಸ್ಥಾಪಿಸುತ್ತಿರುವುದು ಸಮಾಜ ಮುಖಿಯಾಗಿರುವುದಕ್ಕೆ ಸಾಕ್ಷಿ.
ಇಡೀ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಕೋಟ್ಯಾಂತರ ರೂಪಾಯಿಗಳನ್ನ ಸಮಾಜಕ್ಕೆ ಅರ್ಪಿಸುವುದರ ಹಿಂದೆ ಪಕೀರ ದಿಂಗಾಲೇಶ್ವರ ಸ್ವಾಮೀಜಿಗಳ ಅವಿರತ ಶ್ರಮ ಇದೆ ಅನ್ನೋದು ಮಾತ್ರ ಸತ್ಯ.