100 ನೇ ಗ್ರಾಮಕ್ಕೆ ಕಾಲಿಟ್ಟ ಸಂವಿಧಾನ ಜಾಗೃತಿ ಜಾಥಾ. ಶಾಲಾ ಮಕ್ಕಳು, ಗ್ರಾಮಸ್ಥರಿಂದ ಅದ್ಧೂರಿ ಮೆರವಣಿಗೆ.
ಹುಬ್ಬಳ್ಳಿ :-ಜಿಲ್ಲೆಯಲ್ಲಿ ಜನೇವರಿ 26 ರಿಂದ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯು ಕುಂದಗೋಳ ತಾಲೂಕಿನ ಸಂಶಿ ಗ್ರಾಮಕ್ಕೆ ಪ್ರವೇಶಿಸುವ ಮೂಲಕ 100 ನೇ ಗ್ರಾಮಕ್ಕೆ ಕಾಲಿಟ್ಟಂತೆ ಆಗಿದೆ.
ಮಹಿಳೆಯರ ಡೊಳ್ಳು ಕುಣಿತ, ಮುತ್ತೈದೆಯರ ಕುಂಭಮೇಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಜೈ ಭೀಮ್, ಅಂಬೇಡ್ಕರ್ ಕುರಿತಾದ ಜಯಘೋಷಗಳನ್ನು ಸಾರ್ವಜನಿಕರು ಕೂಗಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು ನೃತ್ಯ, ಹಾಡುಗಳನ್ನು ಹಾಡಿದರು. ರಸ್ತೆಗಳಲ್ಲಿ ಚಿತ್ತಾಕರ್ಷಕವಾಗಿ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಮೀನಾಕ್ಷಿ ಗುದಗಿಯವರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಭಾರತಿ ಮೆಣಸಿನಕಾಯಿ, ಸಂಶಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವ ಪುಟ್ಟಣ್ಣವರ, ಉಪಾಧ್ಯಕ್ಷರಾದ ಗೌರಮ್ಮ ಹರಕುಣಿ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಗೀರೀಶ ಅಮರಗೊಂಡ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು, ಶಿಶು ಅಭಿವೃದ್ದಿ ಅಧಿಕಾರಿಗಳು, ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.