ರಜತ್ ಉಳ್ಳಾಗಡ್ಡಿಮಠ ಮನೆಗೆ ದಿಂಗಾಲೇಶ್ವರ ಸ್ವಾಮೀಜಿ ಬೇಟಿ: ರಂಗೇರುತ್ತಿರುವ ಧಾರವಾಡ ಅಖಾಡ.
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿ ಕೊನೆಗೆ ಟಿಕೆಟ್ ವಂಚಿತರಾಗಿರುವ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮನೆಗೆ ಇಂದು ಶಿರಹಟ್ಟಿಯ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ.
ಈ ಹಿಂದೆ ವಿಧಾನಸಭೆ ಹಾಗೂ ಈ ಬಾರಿಯ ಲೋಕಸಭೆ ಎರಡೂ ಸಮಯದಲ್ಲಿ ರಜತ್ ಟಿಕೆಟ್ ವಂಚಿತರಾಗಿದ್ದು ಎಲ್ಲೋ ಒಂದು ಕಡೆ ನಮ್ಮ ಸಮುದಾಯ ತುಳಿತಕ್ಕೆ ಒಳಗಾಗುತ್ತಿದೆ ಎನ್ನುವ ಆತಂಕವನ್ನು ಕೂಡ ಈ ಸಮಯದಲ್ಲಿ ದಿಂಗಾಲೇಶ್ವರ ಶ್ರೀಗಳು ವ್ಯಕ್ತಪಡಿಸಿದರು. ಅಲ್ಲದೆ ರಜತ್ ಮಗಳ ತೊಟ್ಟಿಲ ಕಾರ್ಯಕ್ರಮ ನೆರವೇರಿಸಿ ತದನಂತರ ಗೌಪ್ಯವಾಗಿ ರಾಜಕೀಯ ಚರ್ಚೆ ಕೂಡ ನಡೆಸಿದರು.
ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಲಿಂಗಾಯತ ಹಾಗೂ ಇತರೆ ಸಮಾಜದ ಮುಖಂಡರು ಒಬ್ಬೊಬ್ಬರಾಗಿ ಸ್ವಾಮೀಜಿಗೆ ಬೆಂಬಲ ಸೂಚಿಸುತ್ತಿರುವುದು ಕಂಡುಬರುತ್ತಿದ್ದು. ದಿಂಗಾಲೇಶ್ವರ ಶ್ರೀಗಳು ನಾಮಪತ್ರ ಸಲ್ಲಿಸಿದ ನಂತರ ಧಾರವಾಡ ಜಿಲ್ಲೆಯ ಅಖಾಡ ಮತ್ತಷ್ಟು ರಂಗೇರುವ ಸಾಧ್ಯತೆ ದಟ್ಟವಾಗಿದೆ.
ಮತ್ತೊಂದು ಕಡೆ ಕಾಂಗ್ರೆಸ್ ಹೈಕಮಾಂಡ್ ಕೂಡ ದಿಂಗಾಲೇಶ್ವರ ಶ್ರೀ ಗಳಿಗೆ ಬೆಂಬಲ ನೀಡಬೇಕೇ..? ಅಥವಾ ಅಭ್ಯರ್ಥಿಯನ್ನಾಗಿ ಮಾಡಬೇಕೆ ? ಎನ್ನುವ ಇಕ್ಕಟ್ಟಿಗೆ ಸಿಲುಕಿದ್ದು ಇದುವರೆಗೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.
ಸದ್ಯ ಧಾರವಾಡ ರಾಜಕೀಯ ಪಡಸಾಲಿಯಲ್ಲಿ ಯುವ ಲಿಂಗಾಯತ ಮುಖಂಡರು ಪರೋಕ್ಷವಾಗಿ ದಿಂಗಾಲೇಶ್ವರ ಶ್ರೀ ಗಳನ್ನು ಬೆಂಬಲಿಸುತ್ತಾ ಬರುತ್ತಿದ್ದು ಎರಡು ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.