ಸಂಯುಕ್ತ ಪಾಟೀಲರಿಂದ ನಾಮಪತ್ರ ಸಲ್ಲಿಕೆ. ಬಾದಾಮಿಯ ಬನಶಂಕರಿ ದೇವಾಲಯದಲ್ಲಿ ವಿಶೇಷ ಪೂಜೆ.
ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಸೋಮವಾರ ಸರಳವಾಗಿ ನಾಮಪತ್ರ ಸಲ್ಲಿಸಿದ್ದು, ಮತ್ತೊಮ್ಮೆ ಬೃಹತ್ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳಗ್ಗೆ ಬಾದಾಮಿಯ ಬನಶಂಕರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೆಬ್ಬಳ್ಳಿ ಗ್ರಾಮದ ದೊಡ್ಡ ಲಾಲಸಾಬ್ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಅವರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಮತ್ತು ಎಂ.ಬಿ. ಸೌದಾಗಾರ್ ಇದ್ದರು.
ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಹಲವಾರು ಮುಖಂಡರು ಹಾಜರಿದ್ದು ಸಂಯುಕ್ತ ಪಾಟೀಲ ಅವರಿಗೆ ಶುಭ ಕೋರಿ, ಚುನಾವಣೆಯಲ್ಲಿ ಭಾರಿ ಅಂತರದ ಜಯ ಲಭಿಸಲಿ ಎಂದು ಹಾರೈಸಿದರು.
ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಸಂಯುಕ್ತ ಪಾಟೀಲ ಅವರಿಗೆ ಕಂಬಳಿ ಹೊದಿಸಿ ಶುಭ ಕೋರಲಾಯಿತು. ಸಂಯುಕ್ತ ಪಾಟೀಲ ಅವರೊಂದಿಗೆ ಇದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.