ವಿಶ್ವಸಂಸ್ಥೆಯಿಂದ ಆಘಾತಕಾರಿ ವರದಿ ಬಿಡುಗಡೆ ಆಗಿದ್ದು, ಏಡ್ಸ್ ನಿಂದ ಪ್ರತಿ ನಿಮಿಷಕ್ಕೆ ಒಬ್ಬರು ಸಾವನ್ನಪ್ಪುತ್ತಿದ್ದಾರಂತೆ. ಈ ವರದಿ ನಿಜಕ್ಕೂ ಗಾಬರಿಗೊಳಿಸಿದೆ. ಜಗತ್ತಿನಲ್ಲಿ ಏಡ್ಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸುತ್ತಿರುವಾಗ ಈ ಸುದ್ದಿ ಭಯ ಹುಟ್ಟಿಸುವಂತಿದೆ.
ಕಳೆದ ವರ್ಷ ಏಡ್ಸ್ ಗೆ ಕಾರಣವಾಗುವ ಎಚ್ ಐವಿ ವೈರಸ್ ಜಗತ್ತಿನ ಸುಮಾರು 4 ಕೋಟಿ ಜನರಲ್ಲಿ ಪತ್ತೆಯಾಗಿತ್ತು. ಈ ಪೈಕಿ 90 ಲಕ್ಷ ಜನರಿಗೆ ಯಾವುದೇ ಚಿಕಿತ್ಸೆ ಸಿಗಲಿಲ್ಲ. ಪರಿಣಾಮವಾಗಿ, ಪ್ರತಿ ನಿಮಿಷಕ್ಕೂ ಕೆಲವು ರೋಗಿಗಳು ಏಡ್ಸ್‌ನಿಂದ ಸಾವನ್ನಪ್ಪಿದ್ದಾರೆ. ಕಳೆದ ವರ್ಷ 6 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಣದ ಕೊರತೆಯೇ ಇದಕ್ಕೆ ಕಾರಣ. ಈ ಕಾರಣದಿಂದಾಗಿ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪೂರ್ವ ಯುರೋಪ್, ಮಧ್ಯ ಏಷ್ಯಾ ಮತ್ತು ಲ್ಯಾಟಿನ್ ಅಮೇರಿಕದಲ್ಲಿನ ಹೊಸ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿದೆ.
2023 ರಲ್ಲಿ ಸುಮಾರು 6,30,000 ಜನರು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಇದು 2004 ರಲ್ಲಿ ಕಂಡ 21 ಲಕ್ಷ ಸಾವುಗಳಿಗಿಂತ ಕಡಿಮೆಯಾಗಿದೆ. 2030 ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸುವುದಾಗಿ ಜಾಗತಿಕ ನಾಯಕರು ಪ್ರತಿಜ್ಞೆ ಮಾಡಿದ್ದಾರೆ ಎಂದು UNAIDS ಕಾರ್ಯನಿರ್ವಾಹಕ ನಿರ್ದೇಶಕಿ ವಿನ್ನಿ ಬೈನಿಮಾ ಹೇಳಿದ್ದಾರೆ . ಲಿಂಗ ಅಸಮಾನತೆಯು ಆಫ್ರಿಕಾದ ಕೆಲವು ಭಾಗಗಳಲ್ಲಿ ಹದಿಹರೆಯದ ಹುಡುಗಿಯರು ಮತ್ತು ಯುವತಿಯರಲ್ಲಿ ಹೆಚ್ಚಿದ HIV ಪ್ರಕರಣಗಳಿಗೆ ಕಾರಣವಾಗಿದೆ.
ಅಂಚಿನಲ್ಲಿರುವ ಸಮುದಾಯಗಳಲ್ಲಿ ಜಾಗತಿಕವಾಗಿ ಹೊಸ ಸೋಂಕುಗಳ ಪ್ರಮಾಣವು 2010 ರಲ್ಲಿ 45% ರಿಂದ 2023 ರಲ್ಲಿ 55% ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ವರ್ಷಕ್ಕೆ ಎರಡು ಚುಚ್ಚುಮದ್ದುಗಳ ಬೆಲೆ 40,000 ಡಾಲರ್ (33.47 ಲಕ್ಷ ರೂ.) ಇದು ಸಾಮಾನ್ಯರಿಗೆ ನಿಲುಕದ್ದು ಎನ್ನಲಾಗಿದೆ. ಅಸುರಕ್ಷಿತ ಸೂಜಿಗಳಿಂದ ಹಚ್ಚೆ ಮತ್ತು ದೇಹವನ್ನು ಚುಚ್ಚುವ ಸಮಯದಲ್ಲೂ ಏಡ್ಸ್ ಹರಡುವ ಅಪಾಯವಿದೆ. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸೋಂಕಿತ ಗರ್ಭಿಣಿ ತಾಯಿಯಿಂದ ಅವಳ ಮಗುವಿಗೆ ಕೂಡ ಏಡ್ಸ್ ಹರಡುತ್ತದೆ.