ಭಾರತ ಮಹಿಳಾ ಕ್ರಿಕೆಟ್ ತಂಡವು ನೇಪಾಳ ತಂಡದ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2024ರ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್ಸ್ ಸಹ ಆಗಿರುವ ಭಾರತ 2024ರಲ್ಲಿ ಮಹಿಳಾ ಏಷ್ಯಾಕಪ್ ಟೂರ್ನಿಯ ಸೆಮಿಸ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವೂ ಆಗಿದೆ.
ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಆರಂಭಿಕ ಆಟಗಾರ್ತಿಯಾದ ದಯಾಳನ್ ಹೇಮಲತಾ(47) ಮತ್ತು ಶಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 178 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ನೇಪಾಳ ಆರಂಭದಲ್ಲೇ ಸತತವಾಗಿ ವಿಕೆಟ್ ಕಳೆದುಕೊಂಡು ಅಂತಿಮವಾಗಿ 9 ವಿಕೆಟ್ಗೆ 96 ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಯುಎಇ ವಿರುದ್ಧ ಆರು ವಿಕೆಟ್ ಗೆಲುವಿನೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದ ನೇಪಾಳ ತಂಡ ನಿನ್ನೆಯ ಪಂದ್ಯದಲ್ಲಿ ಭಾರತ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುತ್ತಿದ್ದರೆ ಪಾಕಿಸ್ತಾನವನ್ನು ಹಿಂದಿಕ್ಕಿ ಸೆಮಿಫೈನಲ್ ಹಂತಕ್ಕೇರುವ ಅವಕಾಶವಿತ್ತು. ಆದರೆ ಸೋಲು ಕಂಡು ಈ ಅವಕಾಶದಿಂದ ವಂಚಿತವಾಯಿತು. ಭಾರತ ಪರ ಬೌಲಿಂಗ್ನಲ್ಲಿ ಅರುಂಧತಿ ರೆಡ್ಡಿ(2), ದೀಪ್ತಿ ಶರ್ಮಾ(3), ರಾಧಾ ಯಾದವ್(2) ವಿಕೆಟ್ ಕಿತ್ತು ಮಿಂಚಿದರು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಆರಂಭಿಕ ಆಟಗಾರ್ತಿಯಾದ ದಯಾಳನ್ ಹೇಮಲತಾ ಮತ್ತು ಶಫಾಲಿ ವರ್ಮಾ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿದರು. ಉಭಯ ಆಟಗಾರ್ತಿಯರ ಈ ಬ್ಯಾಟಿಂಗ್ ಪೈಪೋಟಿಯಿಂದಾಗಿ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಈ ಜೋಡಿ ಬರೋಬ್ಬರಿ 122 ರನ್ ಒಟ್ಟುಗೂಡಿಸಿತು. ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಹೇಮಲತಾ 47 ರನ್ ಗಳಿಸಿದ್ದ ವೇಳೆ ವಿಕೆಟ್ ಕೈಚೆಲ್ಲಿದರು. ಕೇವಲ 3 ರನ್ ಅಂತೆದಿಂದ ಅರ್ಧಶತಕ ತಪ್ಪಿಸಿಕೊಂಡರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ದಾಖಲಾಯಿತು
ಜತೆಗಾರ್ತಿ ಹೇಮಲತಾ ವಿಕೆಟ್ ಬಿದ್ದರೂ ಕೂಡ ಶಫಾಲಿ ಬ್ಯಾಟಿಂಗ್ ಆರ್ಭಟಕ್ಕೇನು ಅಡ್ಡಿಯಾಗಲಿಲ್ಲ. ಅವರು ಮುನ್ನುಗ್ಗಿ ಬಾರಿಸುತ್ತಲೇ ಇದ್ದರು. ಕೇವಲ 26 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಇದು ಅವರ 10ನೇ ಟಿ20 ಅರ್ಧಶತಕ. ಇನ್ನೇನು ಶತಕ ಬಾರಿಸುತ್ತಾರೆ ಎನ್ನುವಷ್ಟರಲ್ಲಿ ಅವಸರ ಮಾಡಿಕೊಂಡು ಸ್ಟಂಪ್ಡ್ ಆಗಿ ವಿಕೆಟ್ ಕಳೆದುಕೊಂಡರು. 48 ಎಸೆತ ಎದುರಿಸಿದ ಶಫಾಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 81 ರನ್ ಬಾರಿಸಿದರು. ಇದೇ ವೇಳೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪರ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡರು.