ಮಂಗಳೂರು:- ಬೆಳ್ಳಂ ಬೆಳಗ್ಗೆ ಪೊಲೀಸರು ಮಂಗಳೂರು ಜೈಲಿನ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ, ಡ್ರಗ್ಸ್, ಮೊಬೈಲ್ ಗಳು ಪತ್ತೆ ಆಗಿದ್ದು, ಅಕ್ರಮಗಳು ಬಟಾ ಬಯಲಾಗಿದೆ.
ಮುಂಜಾನೆ 4 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸುಮಾರು 1.30 ಗಂಟೆಗಳ ಅವಧಿ ನಡೆಯಿತು. ದಾಳಿ ವೇಳೆ 25 ಮೊಬೈಲ್ ಫೋನ್ಗಳು, 1 ಬ್ಲೂಟೂತ್, 5 ಇಯರ್ಫೋನ್ಗಳು, 1 ಪೆನ್ ಡ್ರೈವ್, 5 ಚಾರ್ಜರ್ಗಳು, 1 ಜತೆ ಕತ್ತರಿ, 3 ಕೇಬಲ್ಗಳು ಮತ್ತು ಗಾಂಜಾ ಮತ್ತು ಇತರ ಡ್ರಗ್ಗಳ ಬಹು ಪ್ಯಾಕೆಟ್ಗಳು ಲಭಿಸಿವೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಮಪ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಪೊಲೀಸರು ನಸುಕಿನ ಜಾವ 4 ಗಂಟೆಗೆ ಕಾರ್ಯಾಚರಣೆಗೆ ಇಳಿದಿದ್ದರು. ಜೈಲಿನ ಎಲ್ಲಾ ಬ್ಲಾಕ್ಗಳನ್ನು ಏಕಕಾಲದಲ್ಲಿ ಶೋಧಿಸಲು ಹಲವು ತಂಡಗಳನ್ನು ರಚಿಸಲಾಗಿತ್ತು. ಕೊನೆಯ ಕ್ಷಣದವರೆಗೂ ದಾಳಿಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆಯಲ್ಲಿ 2 ಡಿಸಿಪಿಗಳು, 3 ಎಸಿಪಿಗಳು, 15 ಪಿಐಗಳು ಮತ್ತು ಸುಮಾರು 150 ಸಿಬ್ಬಂದಿ ಪಾಲ್ಗೊಂಡಿದ್ದರು.
ಪೊಲೀಸ್ ಕಮೀಷನರ್ ಪ್ರತಿಕ್ರಿಯೆ: “ಜೈಲಿನೊಳಗೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕಾರ್ಯಾಚರಣೆ ಮಾಡಲಾಗಿದೆ. ಈ ವಸ್ತುಗಳನ್ನು ಜೈಲಿಗೆ ಹೇಗೆ ತರಲಾಯಿತು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.