ಮಳೆಯ ನಡುವೆಯೂ ಪ್ಯಾರಿಸ್ ಒಲಂಪಿಕ್ಸ್ ಗೆ ವೈಭವದ ಚಾಲನೆ: ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ!

Share to all

33ನೇ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಮಳೆಯ ನಡುವೆಯೂ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಅಧಿಕೃತ ಚಾಲನೆ ದೊರೆತಿದೆ. ಸೀನ್‌ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಿದ ಫ್ರಾನ್ಸ್‌, ತನ್ನ ವಿಶಿಷ್ಟ ಪ್ರಯತ್ನದಲ್ಲಿ ಸಫಲವಾಯಿತು. ವಿಶೇಷ ಎಂದರೆ ಈ ಬಾರಿ ಪರೇಡ್ ಆಫ್ ನೇಷನ್ಸ್ ಅನ್ನು ನದಿಯಲ್ಲಿ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಸ್ಟೇಡಿಯಂ ಒಳಗೆ ನಡೆಯುವ ಕ್ರೀಡಾಪಟುಗಳ ಮೆರವಣಿಗೆಯು ಈ ಸಲ ಬೋಟ್​ಗಳಲ್ಲಿ ಆಯೋಜಿಸಿ ಪ್ರೇಕ್ಷರನ್ನು ಭವ್ಯತೆ ಮತ್ತು ಸಾಂಕೇತಿಕವಾಗಿ ಆಕರ್ಷಿಸಿತು.

ಈ ಪರೇಡ್​ನಲ್ಲಿ ಭಾರತವನ್ನು ಪಿವಿ ಸಿಂಧು ಹಾಗೂ ಶರತ್ ಕಮಲ್ ಮುನ್ನಡೆಸಿದ್ದರು. ಆಸ್ಟರ್ಲಿಟ್ಜ್ ಸೇತುವೆಯ ಭಾಗದಿಂದ ಶುರುವಾದ ಪರೇಡ್ ಆಫ್ ನೇಷನ್ಸ್ ಮೆರವಣಿಯಲ್ಲಿ 85 ದೋಣಿಗಳು 6,800 ಕ್ಕೂ ಹೆಚ್ಚು ಕ್ರೀಡಾಪಟುಗಳು ಕಾಣಿಸಿಕೊಂಡಿದ್ದರು. ಪ್ರತಿ ದೇಶಗಳ ಕ್ರೀಡಾಪಟುಗಳ ಆಗಮನದ ವೇಳೆ ನೆರೆದಿದ್ದ ಪ್ರೇಕ್ಷಕರಿಂದ ಹರ್ಷೋದ್ಗಾರ ಮೊಳಗಿತು. ಆದಾಗ್ಯೂ, ಶನಿವಾರದಂದು ಪಂದ್ಯಗಳಿರುವ ಅನೇಕ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಿಂದ ಹೊರಗುಳಿದಿದ್ದರು. ಇನ್ನು ಈ ಉದ್ಘಾಟನಾ ಸಮಾರಂಭದಲ್ಲಿ ಫ್ರೆಂಚ್ ಫುಟ್​ಬಾಲ್ ತಾರೆ ಝಿನೆಡಿನ್ ಝಿದಾನೆ, ಟೆನಿಸ್ ಆಟಗಾರ ರಾಫೆಲ್ ನಡಾಲ್ ಒಲಿಂಪಿಕ್ಸ್ ಜ್ಯೋತಿಯೊಂದಿಗೆ ಕಾಣಿಸಿಕೊಂಡಿದ್ದರು. ಇವರ ಜೊತೆಗೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಪಾಪ್ ತಾರೆಯರಾದ ಲೇಡಿ ಗಾಗಾ ಮತ್ತು ಅಯಾ ನಕಮುರಾ, IOC ಅಧ್ಯಕ್ಷ ಥಾಮಸ್ ಬಾಚ್ ಮತ್ತು ಪ್ಯಾರಿಸ್ 2024 ಮುಖ್ಯಸ್ಥ ಟೋನಿ ಎಸ್ಟಾಂಗ್ಯುಟ್ ಉಪಸ್ಥಿತರಿದ್ದರು.

ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಸಮ್ಮರ್ ಒಲಿಂಪಿಕ್ಸ್ ಈಗಾಗಲೇ ಶುರುವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಹಾಗೆಯೇ ಈ ಬಾರಿಯ ಒಲಿಂಪಿಕ್ಸ್​ ಭಾರತದಿಂದ ಒಟ್ಟು 117 ಅಥ್ಲೀಟ್‌ಗಳು ಮತ್ತು 140 ಸಹಾಯಕ ಸಿಬ್ಬಂದಿ ಭಾಗವಹಿಸಿದ್ದಾರೆ.


Share to all

You May Also Like

More From Author